Site icon Vistara News

no confidence motion: ‘ಅವಿಶ್ವಾಸ’ಕ್ಕೆ ನಿಮಗೆ ಪಶ್ಚಾತ್ತಾಪವಾಗಲಿದೆ ಎಂದ ರಿಜಿಜು! ಕೇಂದ್ರ ಸರ್ಕಾರಕ್ಕೆ ‘ಇಂಡಿಯಾ’ ತಿರುಗೇಟು

Waqf Act

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರ್ಕಾರದ ವಿರುದ್ಧ ಮಳೆಗಾಲದ ಸಂಸತ್ ಅಧಿವೇಶನದಲ್ಲಿ (Monsoon Parliament Session) ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ (no confidence motion) ಕುರಿತಾದ ಚರ್ಚೆ ಶುರುವಾಗಿದೆ. ಪ್ರತಿಪಕ್ಷಗಳು (Opposition Party Leaders) ಮತ್ತು ಆಡಳಿತ ಪಕ್ಷದ (Ruling Party Leaders) ನಾಯಕರು ಅವಿಶ್ವಾಸ ನಿರ್ಣಯದ ಪರ ಹಾಗೂ ವಿರುದ್ಧವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಮೊದಲಿಗೆ, ಅವಿಶ್ವಾಸ ನಿರ್ಣಯ ಕುರಿತು ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರಿಂದ ಶುರುವಾದ ಚರ್ಚೆ, ಈಗ ಕೇಂದ್ರ ಸಚಿವ ಕಿರೆನ್ ರಿಜಿಜು ಅವರ ತನಕ ಬಂದು ಮುಟ್ಟಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದರ ಕುರಿತು ಪ್ರತಿಪಕ್ಷಗಳು ಪಶ್ಚಾತ್ತಾಪ ಪಡಲಿವೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಮಂಗಳವಾರವೇ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಹೇಳಲಾಗಿತ್ತಾದರೂ ಕೊನೆ ಗಳಿಗೆಯಲ್ಲಿ ಅವರು ತಮ್ಮ ಮಾತನ್ನು ಮುಂದೂಡಿದ್ದಾರೆ. ಮೊದಲನೇ ದಿನ ಏನೇನಾಯ್ತು ನೋಡೋಣ ಬನ್ನಿ.

ಚರ್ಚೆ ಶುರು ಮಾಡಿದ ಗೌರವ್ ಗೊಗೊಯ್

ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಾಳಿರುವ “ಮೌನದ ಪ್ರತಿಜ್ಞೆ” ಮುರಿಯಲು ವಿರೋಧ ಪಕ್ಷಗಳು ಭಾರತವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರುವಂತಾಯಿತು. ಒಂದು ಭಾರತವು ಎರಡು ಮಣಿಪುರಗಳನ್ನು ಸೃಷ್ಟಿಸಿದೆ – ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ವಾಸಿಸುತ್ತಿದೆ ಎಂದು ಗೌರವ್ ಗೊಗೊಯ್ ಅವರು ಹೇಳಿದರು.

ಈ ರೀತಿಯ ಹಿಂಸಾಚಾರಗಳು ನಡೆದಾಗ ಈ ಹಿಂದಿನ ಯಾವುದೇ ಪ್ರಧಾನಿಗಳು ಮಾತನಾಡಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿದ ಗೌರವ್ ಗೊಗೊಯ್ ಅವರು, 2002ರ ಕೋಮು ಗಲಭೆಗಳ ಸಂದರ್ಭದಲ್ಲಿ ಬಿಜೆಪಿಯ ಅಪ್ರತಿಮ ನಾಯಕ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದರು ಎಂದು ನೆನಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಾರಣಗಳಿಗಾಗಿ ಮಣಿಪುರ ಹಿಂಸಾಚಾರ ಕುರಿತು ಮಾತನಾಡುತ್ತಿಲ್ಲ. ಮೊದಲನೆಯದು- ರಾಜ್ಯ ಸರ್ಕಾರ ವಿಫಲ. ಎರಡನೆಯದು- ಗೃಹ ಇಲಾಖೆ ವೈಫಲ್ಯ ಮತ್ತು ಮೂರನೆಯದು- ರಾಷ್ಟ್ರೀಯ ಭದ್ರತಾ ವ್ಯವಸ್ಥೆಗಳನ್ನು ಮಾಡುವುದರಲ್ಲಿ ವೈಫಲ್ಯ. ಈ ಕಾರಣಗಳಿಂದ ಅವರು ಮಾತನಾಡುತ್ತಿಲ್ಲ ಎಂದು ಕುಟುಕಿದರು.

ಪಶ್ಚಾತ್ತಾಪ ಪಡಬೇಕಾಗುತ್ತದೆ- ಕಿರೆನ್ ರಿಜಿಜು

ಅವಿಶ್ವಾಸ ವಿರುದ್ಧ ಮಾತನಾಡಿದ ಕೇಂದ್ರ ಸಚಿವ ಕಿರೆನ್ ರಿಜಿಜು ಅವರು, ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳು ಪಶ್ಚಾತ್ತಾಪ ಪಡಲಿದ್ದಾರೆ. ಯಾಕೆಂದರೆ, ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯವನ್ನು ತಪ್ಪು ಸಮಯದಲ್ಲಿ ಮತ್ತು ತಪ್ಪು ಅಂಕಿಗಳನ್ನು ಹೊಂದಿರುವಾಗ ಮಂಡಿಸಲಾಗಿದೆ ಎಂದು ಹೇಳಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ನಾವು ಈಶಾನ್ಯ ಭಾಗದತ್ತ ಸ್ವಲ್ಪ ಗಮನ ಹರಿಸುವಂತೆ ಮನಮೋಹನ್ ಸಿಂಗ್ ಅವರನ್ನು ಪದೇ ಪದೇ ಬೇಡಿಕೊಂಡಿದ್ದೇವೆ ಎಂದ ಅವರು, ಇಂದು ಮಣಿಪುರದಲ್ಲಿ ಕಾಂಗ್ರೆಸ್ ಅತಿಯಾದ ಕಾಳಜಿ ತೋರಿಸುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರು.

ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಾಗ್ದಾಳಿ

ಇಂದು (ಮಂಗಳವಾರ) ಬೆಳಗ್ಗೆ ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದು ಸರ್ಕಾರದ ಮೇಲೆ ಅವಿಶ್ವಾಸ ಕೋರುವ ನಿರ್ಣಯವಲ್ಲ. ಆದರೆ, ಪ್ರತಿಪಕ್ಷಗಳಲ್ಲಿ ಯಾರು ಯಾರನ್ನು ನಂಬುತ್ತಾರೆ ಎನ್ನುವುದು ನೋಡುವ ಅವಿಶ್ವಾಸವಾಗಿದೆ! ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡ ಅವರು, ಸೋನಿಯಾ ಅವರಿಗೆ ಈಗ ಎರಡೇ ಕೆಲಸಗಳಿವೆ. ಮಗನಿಗೆ ನೆಲೆ ಒದಗಿಸುವುದು ಮತ್ತು ಅಳಿಯನಿಗೆ ಕಾಣಿಕೆಗಳನ್ನು ನೀಡುವುದಾಗಿದೆ ಎಂದು ಬಿಜೆಪಿಯ ಸಂಸದ ನಿಶಿಕಾಂತ್ ದುಬೆ ಅವರು ವೈಯಕ್ತಿಕವಾಗಿ ನಿಂದನೆ ಮಾಡಿದರು.

ನಿಮ್ಮದು ಹೇಗೆ ಭಿನ್ನ ಪಕ್ಷ? ಬಿಜೆಪಿ ವಿರುದ್ಧ ಸುಳೆ ಕಿಡಿ

ಅವಿಶ್ವಾಸ ನಿರ್ಣಯ ಪರವಾಗಿ ಮಾತನಾಡಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(NCP)ದ ಸದಸ್ಯೆ ಸುಪ್ರಿಯಾ ಸುಳೆ, ನಿಮ್ಮದು ಹೇಗೆ ಭಿನ್ನವಾದ ರಾಜಕೀಯ ಪಕ್ಷವಾಗಿದೆ. ಕಳೆದ 9 ವರ್ಷದಲ್ಲಿ 9 ಸರ್ಕಾಗಳನ್ನು ಪತನ ಮಾಡಿದ್ದೀರಿ. ನೀವು ಆದಾಯ ದುಪ್ಪಟ್ಟು ಬಗ್ಗೆ ಹೇಳಿದ್ದೀರಿ. ಯಾರ ಆದಾಯವು ದುಪ್ಪಟ್ಟಾಗಿದೆ ಹೇಳಿ? ನೀವು ವಂದೇ ಭಾರತ್ ಬಗ್ಗೆ ಹೇಳುತ್ತೀರಿ. ಆದರೆ, ಅದರಲ್ಲಿ ಬಡವರು ಪ್ರಯಾಣಿಸಲು ಸಾಧ್ಯವಿದೆಯೇ? ಹಣದುಬ್ಬರವಿದೆ, ನಿರುದ್ಯೋಗವಿದೆ, ಅಪೌಷ್ಟಿಂಕಾಶ ಸಮಸ್ಯೆ ಇದೆ… ಈ ಸರ್ಕಾರವು ರೈತ ವಿರೋಧಿ ಸರ್ಕಾರವಾಗಿದೆ. ಹಾಗಾಗಿಯೇ ಈ ಸರ್ಕಾರದ ಮೇಲೆ ಯಾರಿಗೂ ವಿಶ್ವಾಸವಿಲ್ಲ ಎಂದು ಟೀಕಿಸಿದರು.

ಈ ಸುದ್ದಿಯನ್ನೂ ಓದಿ: No Confidence Motion: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ಶುರು, ರಾಹುಲ್ ಗಾಂಧಿ ಏಕೆ ಮಾತನಾಡಲಿಲ್ಲ?

ಮತ್ತೆ ಯಾರು ಮಾತನಾಡುವವರು?

ಕೇಂದ್ರ ಸಚಿವರ ಪೈಕಿ ಕಿರೆನ್ ರಿಜಿಜು ಮಾತ್ರವಲ್ಲದೇ, ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಜ್ಯೋತಿರ್ಯಾದಿತ್ಯ ಸಿಂಧಿಯಾ ಮಾತನಾಡಲಿದ್ದಾರೆ. ಅಲ್ಲದೇ, ಇನ್ನೂ 10 ಸಂಸದರು ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಹುಲ್ ಗಾಂಧಿ ಏಕೆ ಮಾತನಾಡಲಿಲ್ಲ?

ಇದಕ್ಕೂ ಮೊದಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ವಾಸ್ತವದಲ್ಲಿ ಅವಿಶ್ವಾಸ ನಿರ್ಣಯವನ್ನು ರಾಹುಲ್ ಗಾಂಧಿ ಅವರು ಆರಂಭಿಸಬೇಕಿತ್ತು. ಆದರೆ, ಕೊನೆಗಳಿಗೆಯಲ್ಲಿ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

2019ರ ಮೋದಿ ಉಪನಾಮ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಕಾಲ ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದಾಗಿತ್ತು. ಆದರೆ, ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸದಸ್ಯತ್ವವನ್ನು ನೀಡಲಾಗಿದೆ. ಹಾಗಾಗಿ, ಅವರು ಲೋಕಸಭೆಯಲ್ಲಿ ಮಾತನಾಡಲಿದ್ದಾರೆಂದು ಹೇಳಲಾಗಿತ್ತು. ಈಗ ಅವರು, ಮೋದಿ ಸದನದಲ್ಲಿದ್ದಾಗಲೇ ಮಾತನಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version