Site icon Vistara News

Creamy Layer: ಎಸ್‌ಸಿ, ಎಸ್‌ಟಿಗೆ ಕೆನೆಪದರ ಮೀಸಲಾತಿ ಇಲ್ಲ; ಸುಪ್ರೀಂ ಆದೇಶದ ಬೆನ್ನಲ್ಲೇ ಕೇಂದ್ರ ಸ್ಪಷ್ಟನೆ

Creamy Layer

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತೀ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮಹತ್ವದ ಹೇಳಿಕೆ ನೀಡಿದೆ. “ಅಂಬೇಡ್ಕರ್‌ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಕೆನೆ ಪದರ (Creamy Layer) ಮೀಸಲಾತಿ ಇಲ್ಲ” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಅವರು, “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಕೆನೆಪದರ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವಿಧ ಸೂಚನೆ ನೀಡಿದೆ. ಸಂವಿಧಾನದ ನಿಬಂಧನೆಗಳ ಅನ್ವಯ ಮೀಸಲಾತಿ ನೀಡಲು ಎನ್‌ಡಿಎ ಸರ್ಕಾರವು ಬದ್ಧವಾಗಿದೆ. ಆದರೆ, ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದಲ್ಲಿ ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಕೆನೆಪದರ ಮೀಸಲಾತಿ ಇಲ್ಲ” ಎಂದು ಹೇಳಿದ್ದಾರೆ.

“ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಕ್ರೀಮಿ ಲೇಯರ್‌ ನಿಬಂಧನೆ ಇಲ್ಲ. ಸಂವಿಧಾನದ ಅನುಗುಣವಾಗಿಯೇ ಎಸ್‌ಸಿ, ಎಸ್‌ಟಿಯವರಿಗೆ ಮೀಸಲಾತಿ ನೀಡಬೇಕಾಗುತ್ತದೆ” ಎಂದು ತಿಳಿಸಿದರು. ಮತ್ತೊಂದೆಡೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲೇ ಅತಿ ಹಿಂದುಳಿದ ಸಮುದಾಯದವರನ್ನು ಗುರುತಿಸುವಾಗ ಹಲವು ಮಾನದಂಡ, ಪರಿಶೀಲನೆ ಮಾಡಬೇಕು. ನಂತರವೇ ಅವರಿಗೆ ಒಳ ಮೀಸಲಾತಿ ನೀಡಬೇಕು ಎಂದು ಕೋರ್ಟ್‌ ತಿಳಿಸಿದೆ.

ಒಳಮೀಸಲಾತಿಯ ಲಾಭವೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

Exit mobile version