Site icon Vistara News

Same Sex Marriage: ಸಲಿಂಗ ವಿವಾಹ ಕೇವಲ ನಗರ ಮೇಲ್ ಸ್ತರದ ದೃಷ್ಟಿಕೋನ ಎಂಬುದಕ್ಕೆ ಡೇಟಾಗಳಿಲ್ಲ; ಸುಪ್ರೀಂ

No data to show Same Sex Marriage is elitist concept, Says Supreme Court

ನವದೆಹಲಿ: ಸಲಿಂಗ ವಿವಾಹ (Same Sex Marriage) ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ 15 ಅರ್ಜಿಗಳ ವಿಚಾರಣೆಯನ್ನು ಆರಂಭಿಸಿರುವ ಸುಪ್ರೀಂ ಕೋರ್ಟ್‌ನ (Supreme Court) ಸಂವಿಧಾನ ಪೀಠವು, ಸಲಿಂಗ ವಿವಾಹ ಮಾನ್ಯತೆಯ ಬೇಡಿಕೆಯು ನಗರ ಮೇಲ್ ಸ್ತರದ ದೃಷ್ಟಿಕೋನ(elitist concept) ಎಂದು ಬೆಂಬಲಿಸುವ ಡೇಟಾಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸಲಿಂಗ ವಿವಾಹದ ಮಾನ್ಯತೆ ಕೋರಿ ನಗರಗಳಿಂದ ಹೆಚ್ಚು ಜನರು ಬರುತ್ತಿದ್ದಾರೆಂದ ಮಾತ್ರಕ್ಕೆ ಅದು ಕೇವಲ ನಗರ ಮೇಲ್ ಸ್ತರದ ದೃಷ್ಟಿಕೋನ ಎಂದು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹೇಳಿದ್ದಾರೆ.

ಸಲಿಂಗ ವಿವಾಹ ಮಾನ್ಯತೆಯ ಅರ್ಜಿಗಳ ವಿಚಾರಣೆಗೂ ಮುನ್ನವೇ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿ, ಸಲಿಂಗ ವಿವಾಹ ಮಾನ್ಯತೆಯ ಬೇಡಿಕೆಯು ಇಡೀ ರಾಷ್ಟ್ರದ ದೃಷ್ಟಿಕೋನಗಳನ್ನು ಪ್ರತಿನಿಧಿಸುವುದಿಲ್ಲ. ಅವು ಕೇವಲ ನಗರ ಮೇಲ್ ಸ್ತರ ದೃಷ್ಟಿಕೋನಗಳ ಪ್ರತಿಬಿಂಬಗಳಾಗಿವೆ ಎಂದು ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ಕೇಂದ್ರ ಸರ್ಕಾರದ ಈ ಹೇಳಿಕೆಗೆ ಯಾವುದೇ ಡೇಟಾಗಳ ಬೆಂಬಲವಿಲ್ಲ ಎಂದು ಹೇಳಿದರು.

ವ್ಯಕ್ತಿಯ ನಿಯಂತ್ರಣಕ್ಕೆ ನಿಲುಕದ ಗುಣಲಕ್ಷಣದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ಸರ್ಕಾರವು ತಾರತಮ್ಯ ಮಾಡುವಂತಿಲ್ಲ. ನೀವು ಅದನ್ನು ಸಹಜ ಗುಣಲಕ್ಷಣಗಳೆಂದು ನೋಡಿದಾಗ, ಅದು ನಗರ ಮೇಲ್ ಸ್ತರದ ದೃಷ್ಟಿಕೋನದ ವಿರುದ್ಧವಾಗಿ ಕಾಣತ್ತದೆ. ಬಹುಶಃ ನಗರಗಳಿಂದ ಹೆಚ್ಚು ಜನರು ಬರುತ್ತಿರುವ ಕಾರಣ ಸಲಿಂಗ ವಿವಾಹವು ನಗರ ಮೇಲ್ ಸ್ತರದ ದೃಷ್ಟಿಕೋನವಾಗಿದೆ ಎಂದು ತೋರಿಸಲು ಸರ್ಕಾರವು ಯಾವುದೇ ಡೇಟಾವನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರವು ಸಲಿಂಗ ವಿವಾಹ ಮಾನ್ಯತೆಯ ವಿಚಾರಣೆಯನ್ನು ನಡೆಸುವುದನ್ನು ಕೇಂದ್ರ ಸರ್ಕಾರವು ವಿರೋಧಿಸಿತ್ತು. ಯಾಕೆಂದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಸಾಮಾಜಿಕ ಸಂಬಂಧ ಸ್ಥಾಪನೆಯ ಕುರಿತು ಶಾಸಕಾಂಗ(ಸಂಸತ್ತು) ಮಾತ್ರ ನಿರ್ಧರಿಸಲು ಸಾಧ್ಯ ಎಂದು ಕೇಂದ್ರ ವಾದಿಸಿತ್ತು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹಕ್ಕೆ ಅನುಮತಿ, ಆತುರದ ತೀರ್ಮಾನ ಬೇಡ

ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ಶಾಸಕಾಂಗ ಜನಪ್ರಿಯ ಇಚ್ಛೆಗೆ ಅನುಗುಣವಾಗಿ ವರ್ತಿಸುವುದು ಅದರ ಕರ್ತವ್ಯವಾಗಿದೆ. ಸಾಮಾಜಿಕ ಒಮ್ಮತವು ಮದುವೆಯ ನಿರ್ದಿಷ್ಟ ವ್ಯಾಖ್ಯಾನವನ್ನು ಬೆಂಬಲಿಸಿದರೆ, ಶಾಸಕಾಂಗವು ಆ ರೂಪಕ್ಕೆ ಅನುಮತಿ ನೀಡುವಲ್ಲಿ ಜನರ ಇಚ್ಛೆಗೆ ಬದ್ಧವಾಗಿರುವ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ. ಈ ನಿಸ್ಸಂದಿಗ್ಧವಾದ ಪ್ರಜಾಸತ್ತಾತ್ಮಕ ಇಚ್ಛೆಯನ್ನು ನ್ಯಾಯಾಂಗ ಆದೇಶದಿಂದ ನಿರಾಕರಿಸಬಾರದು ಎಂದು ಕೇಂದ್ರ ಸರ್ಕಾರವು ಹೇಳಿತ್ತು.

Exit mobile version