ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯಿಂದ ತೆರವಾದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ (Wayanad Bypolls) ಸದ್ಯಕ್ಕೆ ಉಪ ಚುನಾವಣೆ ಇಲ್ಲ ಎಂದು ಚುನಾವಣೆ ಆಯೋಗ ತಿಳಿಸಿದೆ. ರಾಹುಲ್ ಗಾಂಧಿ ಅನರ್ಹತೆಯಿಂದಾಗಿ ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಲು ಆಯೋಗವು ದಿನಾಂಕ ಘೋಷಿಸುವ ನಿರೀಕ್ಷೆ ಇತ್ತು. ಆದರೆ, ವಯನಾಡು ಉಪ ಚುನಾವಣೆ ನಡೆಸಲು ಚುನಾವಣೆ ಆಯೋಗಕ್ಕೆ ಅವಸರ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.
ವಯನಾಡು ಕ್ಷೇತ್ರದ ಉಪ ಚುನಾವಣೆ ದಿನಾಂಕದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಮಾರ್ಚ್ 23ರಂದು ಕ್ಷೇತ್ರದಲ್ಲಿ ಸಂಸದರ ಹುದ್ದೆ ಖಾಲಿಯಾಗಿದೆ. ಹಾಗಾಗಿ, ಚುನಾವಣೆ ಆಯೋಗಕ್ಕೆ ಯಾವುದೇ ಅವಸರ ಇಲ್ಲ. ಅದರಲ್ಲೂ, ರಾಹುಲ್ ಗಾಂಧಿ ಅವರಿಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ಒಂದು ತಿಂಗಳು ಕಾಲಾವಕಾಶ ನೀಡಿದೆ. ಹಾಗಾಗಿ, ಈಗಲೇ ಉಪ ಚುನಾವಣೆಯ ದಿನಾಂಕ ಘೋಷಿಸಿಲ್ಲ” ಎಂದು ಹೇಳಿದರು.
“1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ಪ್ರಕಾರ, ಯಾವುದೇ ಕ್ಷೇತ್ರವು ಖಾಲಿಯಾದರೆ, ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಹಾಗಾಗಿ, ಈಗಲೇ ಚುನಾವಣೆ ನಡೆಸುತ್ತಿಲ್ಲ. ಮುಂಬರುವ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಕುರಿತು ಉನ್ನತ ನ್ಯಾಯಾಲಯಗಳು ನೀಡುವ ತೀರ್ಪಿನ ಆಧಾರದ ಮೇಲೆ ಚುನಾವಣೆ ಆಯೋಗವು ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ವಯನಾಡಿನಲ್ಲಿ ಚುನಾವಣೆ ನಡೆಸಲು ಆಗುವುದಿಲ್ಲ” ಎಂದು ಮಾಹಿತಿ ನೀಡಿದರು.
ಉಪ ಚುನಾವಣೆ ದಿನಾಂಕ ಘೋಷಣೆ
ಪಂಜಾಬ್‌ನ ಜಲಂಧರ್ ಲೋಕಸಭೆ ಕ್ಷೇತ್ರ ಹಾಗೂ ಮೂರು ರಾಜ್ಯಗಳ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ಆಯೋಗವು ಉಪ ಚುನಾವಣೆ ದಿನಾಂಕ ಘೋಷಿಸಿದೆ. ಜಲಂಧರ್ ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶದ ಚನ್‌ಬೆ, ಸುವಾರ್, ಒಡಿಶಾದ ಜರ್‌ಸುಗುಡ ಹಾಗೂ ಮೇಘಾಲಯದ ಸೋಹಿಯೋಂಗ್ ವಿಧಾನಸಭೆ ಕ್ಷೇತ್ರಗಳಲ್ಲಿ ಮೇ 10ರಂದು ಉಪ ಚುನಾವಣೆ ನಡೆಯಲಿದೆ. ಮೇ 13ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹತೆಯ ಕುರಿತು ರಾಜಕೀಯ ವಾದ-ವಿವಾದಗಳು ಭುಗಿಲೆದ್ದ ಬೆನ್ನಲ್ಲೇ, ಲಕ್ಷದ್ವೀಪವನ್ನು ಪ್ರತಿನಿಧಿಸುತ್ತಿದ್ದ ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಬುಧವಾರ ರದ್ದು ಮಾಡಲಾಗಿದೆ. ಕೊಲೆ ಯತ್ನ ಪ್ರಕರಣವೊಂದರಲ್ಲಿ ಫೈಜಲ್ ವಿರುದ್ಧ ನ್ಯಾಯಾಲಯವು 10 ವರ್ಷ ಶಿಕ್ಷೆ ವಿಧಿಸಿತ್ತು. ಪರಿಣಾಮ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಈ ಶಿಕ್ಷೆಗೆ ಕೇರಳ ಹೈಕೋರ್ಟ್ ಜನವರಿಯಲ್ಲೇ ತಡೆ ನೀಡಿತ್ತು. ಹೀಗಿದ್ದೂ, ಫೈಜಲ್ ಅವರ ಅನರ್ಹತೆಯನ್ನು ಲೋಕಸಭೆ ಕಾರ್ಯದರ್ಶಿ ರದ್ದು ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ, ಫೈಜಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬುಧವಾರ, ಫೈಜಲ್ ಅವರ ಅನರ್ಹತೆಯನ್ನು ರದ್ದು ಮಾಡಿದ್ದರಿಂದ, ಸುಪ್ರೀಂ ಕೋರ್ಟ್ ಫೈಜಲ್ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಇದನ್ನೂ ಓದಿ: Disqualification Row: ಲಕ್ಷದ್ವೀಪ ಸಂಸದ ಫೈಜಲ್ ಲೋಕಸಭೆ ಸದಸ್ಯತ್ವ ಅನರ್ಹತೆ ರದ್ದು! ರಾಹುಲ್ ಗಾಂಧಿ ದಾರಿ ಸುಗಮ?