Site icon Vistara News

Halal Ban: ದೇಶಾದ್ಯಂತ ಶೀಘ್ರವೇ ‘ಹಲಾಲ್‌’ ನಿಷೇಧ? ಮಹತ್ವದ ಅಪ್‌ಡೇಟ್‌ ಕೊಟ್ಟ ಅಮಿತ್‌ ಶಾ

Amit Shah

No decision on halal ban by Centre yet, says Amit Shah In Hyderabad

ಹೈದರಾಬಾದ್:‌ ಉತ್ತರ ಪ್ರದೇಶದಲ್ಲಿ ಹಲಾಲ್‌ ಪ್ರಮಾಣಪತ್ರ ಇರುವ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ (Halal Ban) ಬೆನ್ನಲ್ಲೇ ಹಲಾಲ್‌ ಪ್ರಮಾಣಪತ್ರ ಇರುವ ಉತ್ಪನ್ನಗಳ ನಿಷೇಧದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹತ್ವದ ಅಪ್‌ಡೇಟ್‌ ನೀಡಿದ್ದಾರೆ. “ದೇಶಾದ್ಯಂತ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ (Halal Certified Products) ನಿಷೇಧದ ಕುರಿತು ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರವು ದೇಶಾದ್ಯಂತ ನಿಷೇಧ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮಿತ್‌ ಶಾ ಅವರು ಈ ಕುರಿತು ಮಾಹಿತಿ ನೀಡಿದರು. “ಹಲಾಲ್‌ ಪ್ರಮಾಣಪತ್ರ ಇರುವ ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಸಾಗಣೆಯ ನಿಷೇಧದ ಕುರಿತು ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು. ಆದರೆ, ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ನಿಷೇಧದ ಕುರಿತು ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತು ಅಮಿತ್‌ ಶಾ ಅವರು ಯಾವುದೇ ಮಾಹಿತಿ ನೀಡಿಲ್ಲ. ನವೆಂಬರ್‌ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ಸಾಲು ಸಾಲು ಚುನಾವಣೆ ರ‍್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅಮಿತ್‌ ಶಾ ಸುದ್ದಿಗೋಷ್ಠಿ

ಇದನ್ನೂ ಓದಿ: Halal Tea Row: ಹಲಾಲ್‌ ಟೀ ಎಂದು ರೈಲ್ವೆ ಸಿಬ್ಬಂದಿ ಜತೆ ಜಗಳ, ಟೀ ಯಾವಾಗ್ಲೂ ವೆಜ್‌ ಸರ್‌ ಎಂದ ಅಧಿಕಾರಿ

ಉತ್ತರ ಪ್ರದೇಶದಲ್ಲಿ ನಿಷೇಧ

ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ಕೆಲವು ದಿನಗಳ ಹಿಂದಷ್ಟೇ ನಿಷೇಧಿಸಿದೆ. “ಉತ್ತರ ಪ್ರದೇಶದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ” ಎಂದು ಉತ್ತರ ಪ್ರದೇಶ ಸರ್ಕಾರವು ಕೆಲ ದಿನಗಳ ಹಿಂದಷ್ಟೇ ಆದೇಶ ಹೊರಡಿಸಿದೆ.

ಜನರ ಆರೋಗ್ಯದ ದೃಷ್ಟಿಯಿಂದ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ಉಲ್ಲೇಖಿಸಿದೆ. “ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ” ಎಂದು ತಿಳಿಸಿತ್ತು.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಔಷಧಗಳ ಮೇಲೆ ನಕಲಿ ಪ್ರಮಾಣಪತ್ರ ಅಂಟಿಸಿ ಹಲಾಲ್‌ ಪ್ರಮಾಣೀಕೃತ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೊಂದು ದೊಡ್ಡ ಅಕ್ರಮ ಎಂಬ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕಾಗಿ ಯೋಗಿ ಆದಿತ್ಯನಾಥ್‌ ಸರ್ಕಾರವು ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕೆಲ ಕಂಪನಿಗಳ ವಿರುದ್ಧ ನಕಲಿ ಪ್ರಮಾಣಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಕೂಡ ದಾಖಲಾಗಿದ್ದವು.

ಹಲಾಲ್‌ ಸರ್ಟಿಫೈಡ್ ಎಂದರೆ ಏನು?

ಇಸ್ಲಾಮಿಕ್‌ ಪ್ರಕ್ರಿಯೆಗಳನ್ನು ಅನುಸರಿಸಿ, ಆ ಮಾರ್ಗಸೂಚಿಗಳನ್ನು ಪಾಲಿಸಿ ಉತ್ಪಾದನೆ ಮಾಡಿದ ಉತ್ಪನ್ನಗಳೇ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳಾಗಿವೆ. ಹಲಾಲ್‌ ಎಂದರೆ ಅನುಮತಿ ಎಂಬ ಅರ್ಥವೂ ಇದೆ. ಆದರೆ, ಹಲಾಲ್‌ ಕಟ್‌ ಅಥವಾ ಹಲಾಲ್‌ ಪ್ರಮಾಣೀಕೃತ ಮಾಂಸ ಎಂಬುದು ಜಾಸ್ತಿ ಬಳಕೆಯಲ್ಲಿದೆ. ಹಲಾಲ್‌ ಪ್ರಮಾಣೀಕೃತ ಉತ್ಪನ್ನ ಎಂದರೆ ಮಾಂಸ ಎಂಬ ಭಾವನೆ ಇದೆ. ಕೆಲ ತಿಂಗಳ ಹಿಂದಷ್ಟೇ ರೈಲಿನಲ್ಲಿ ಹಲಾಲ್‌ ಸರ್ಟಿಫೈಡ್‌ ಆಗಿರುವ ಟೀ ಪ್ಯಾಕೆಟ್‌ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದರು. ಇದರ ಕುರಿತು ಕೂಡ ಚರ್ಚೆಗಳು ನಡೆದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version