Site icon Vistara News

Navjot Singh Sidhu: ಜೈಲಿಂದ ಸಿಕ್ಸರ್‌ ಸಿಧು ಬಿಡುಗಡೆ, ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವ ನಿರ್ನಾಮ ಎಂದು ಆಕ್ರೋಶ

No democracy in Punjab now, says Navjot Singh Sidhu after walking out of jail

ನವಜೋತ್‌ ಸಿಂಗ್‌ ಸಿಧು

ಚಂಡೀಗಢ: ರಸ್ತೆ ಮಧ್ಯೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 10 ತಿಂಗಳು ಜೈಲು ವಾಸದ ನಂತರ ಪಂಜಾಬ್‌ ಕಾಂಗ್ರೆಸ್‌ ನಾಯಕ, ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಂಧು (Navjot Singh Sidhu) ಅವರು ಪಟಿಯಾಲದ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದಲೇ ಹೊರಬರುತ್ತಲೇ ಪಂಜಾಬ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವವು ಮರೀಚಿಕೆಯಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂಬ ಪಿತೂರಿಯೂ ನಡೆಯುತ್ತಿದೆ” ಎಂದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಇವುಗಳಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ಸುಳ್ಳು ಭರವಸೆಗಳಿಂದ ರಾಜ್ಯವನ್ನು ಅಭಿವೃದ್ಧಿಗೊಳಿಸಲು ಆಗುವುದಿಲ್ಲ. ಅಷ್ಟಕ್ಕೂ, ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಸಂಚು ರೂಪಿಸಲಾಗುತ್ತಿದೆ” ಎಂದು ದೂರಿದರು.

ರಾಹುಲ್‌ ಗಾಂಧಿ ಕ್ರಾಂತಿಯ ಕಿಡಿ

“ದೇಶದಲ್ಲಿ ಸಂಸ್ಥೆಗಳನ್ನು ಗುಲಾಮಗಿರಿಗೆ ತಳ್ಳಲಾಗಿದೆ. ಸಾಂಸ್ಥಿಕ ರಚನೆಯೇ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ದೇಶವು ಏಳಿಗೆ ಹೊಂದಲು ಸಾಧ್ಯವಿಲ್ಲ” ಎಂದರು. ರಾಹುಲ್‌ ಗಾಂಧಿ ಕುರಿತು ಕೂಡ ಪ್ರತಿಕ್ರಿಯಿಸಿದ ಸಿಧು, “ರಾಹುಲ್‌ ಗಾಂಧಿ ಅವರು ಸಂವಿಧಾನದ ರಕ್ಷಕರಾಗಿದ್ದಾರೆ. ಅವರು ಕ್ರಾಂತಿಯ ಕಿಡಿಯಾಗಿದ್ದಾರೆ. ನಾನು ಅವರ ಜತೆ ನಿಲ್ಲುತ್ತೇನೆ” ಎಂದರು. ಆದರೆ, ಪಂಜಾಬ್‌ ಕಾನೂನು ಸುವ್ಯವಸ್ಥೆ, ವಾರಿಸ್‌ ಪಂಜಾಬ್‌ ದೇ ಮುಖ್ಯಸ್ಥ ಅಮೃತ್‌ಪಾಲ್‌ ಸಿಂಗ್‌ ಪರಾರಿಯಾಗಿರುವುದು, ಸಿಧು ಮೂಸೆವಾಲಾ ಹತ್ಯೆ ಸೇರಿ ಹಲವು ವಿಷಯಗಳ ಕುರಿತು ತಕ್ಷಣವೇ ಪ್ರತಿಕ್ರಿಯಿಸಲು ನಿರಾಕರಿಸಿದರು.

ಜೈಲಿನಿಂದ ಹೊರಗೆ ಬಂದ ಸಿಧು

ಸಿಕ್ಸರ್‌ ಸಿಧುಗೆ ಅದ್ಧೂರಿ ಸ್ವಾಗತ

ಕ್ರಿಕೆಟ್‌ ವೃತ್ತಿಜೀವನದ ವೇಳೆ ಸಿಕ್ಸರ್‌ ಸಿಧು ಎಂದೇ ಖ್ಯಾತಿಯಾಗಿದ್ದ ನವಜೋತ್ ಸಿಂಗ್‌ ಸಿಧು ಅವರು ಜೈಲಿನಿಂದ ಹೊರಬರುತ್ತಲೇ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನವಜೋತ್‌ ಸಿಂಗ್‌ ಸಿಧು ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಡೊಳ್ಳು ಬಾರಿಸಿ, ಜಾನಪದ ನೃತ್ಯದ ಮೂಲಕ ಅವರನ್ನು ಸ್ವಾಗತಿಸಿದರು. ನವಜೋತ್‌ ಸಿಂಗ್‌ ಸಿಧು ಜಿಂದಾಬಾದ್‌ ಎಂಬುದು ಸೇರಿ ಹಲವು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: Navjot Kaur: ‌’ಕಾದಿರುವೆ ನಿನಗಾಗಿ’; ನವಜೋತ್‌ ಸಿಂಗ್‌ ಸಿಧು ಪತ್ನಿಗೆ ಕ್ಯಾನ್ಸರ್‌, ಜೈಲಲ್ಲಿರುವ ಪತಿಯ ನೆನೆದ ಕೌರ್‌

ಯಾವ ಪ್ರಕರಣದಲ್ಲಿ ಜೈಲು?

1988ರಲ್ಲಿ ನಡೆದಿದ್ದ ರಸ್ತೆ ಜಗಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನವಜೋತ್‌ ಸಿಂಗ್‌ ಸಿಧು ಅವರಿಗೆ 2022ರ ಮೇ 22ರಂದು 1988ರ ಡಿಸೆಂಬರ್‌ನಲ್ಲಿ ಪಟಿಯಾಲಾದ ಪಾರ್ಕಿಂಗ್‌ ಸ್ಥಳವೊಂದರಲ್ಲಿ ನವಜೋತ್‌ ಸಿಂಗ್‌ ಸಿಧು ಮತ್ತು ಅವರ ಸಹಚರ ರೂಪಿಂದರ್‌ ಸಿಂಗ್‌ ಸಂಧು ಸೇರಿ, ಹಿರಿಯ ನಾಗರಿಕ ಗುರ್ನಾಮ್‌ ಸಿಂಗ್‌ರಿಗೆ ಬೈದಿದ್ದಲ್ಲದೆ, ಅವರನ್ನು ಕಾರಿನಿಂದ ಕೆಳಗೆ ಇಳಿದು ತಲೆಗೆ ಹೊಡೆದಿದ್ದರು. ಅದಾದ ಕೆಲವು ದಿನಗಳಲ್ಲಿ ಗುರ್ನಾಮ್‌ ಸಿಂಗ್‌ ಮೃತಪಟ್ಟಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್‌ತನಕ ಹೋಗಿತ್ತು. ಸರ್ವೋಚ್ಚ ನ್ಯಾಯಾಲಯವು ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Exit mobile version