Site icon Vistara News

ಜೈಲಲ್ಲೇ ಸಾಯಲು ಬಿಡಿ; ಕೋರ್ಟ್‌ನಲ್ಲಿ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಹೀಗೆ ಬಿಕ್ಕಳಿಸಿದ್ದೇಕೆ?

Naresh Goyal

No Hope, Better To Die In Jail: Naresh Goyal To Court With Folded Hands

ಮುಂಬೈ: ಕೆನರಾ ಬ್ಯಾಂಕ್‌ಗೆ 538 ಕೋಟಿ ರೂ. ವಂಚನೆ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಜೈಲುಪಾಲಾಗಿರುವ ಜೆಟ್‌ ಏರ್‌ವೇಸ್‌ (Jet Airways) ಸಂಸ್ಥಾಪಕ ನರೇಶ್‌ ಗೋಯಲ್‌ (Naresh Goyal) ಅವರು ನ್ಯಾಯಾಲಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ. ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, “ನಾನು ಜೀವನದಲ್ಲಿ ಎಲ್ಲ ಭರವಸೆ ಕಳೆದುಕೊಂಡಿದ್ದೇನೆ. ನಾನು ಇಂತಹ ಸ್ಥಿತಿಯಲ್ಲಿ ಬದುಕುವುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ” ಎಂಬುದಾಗಿ ಕೋರ್ಟ್‌ನಲ್ಲಿ ಬಿಕ್ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

“ನನ್ನ ಹೆಂಡತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ನನ್ನ ಮಗಳ ಆರೋಗ್ಯ ಕೂಡ ಹದಗೆಟ್ಟಿದೆ. ಜೈಲಿನಲ್ಲಿರುವ ನನ್ನ ಆರೋಗ್ಯ ಸ್ಥಿತಿಯೂ ಬಿಗಡಾಯಿಸಿದೆ. ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸಾಲಿನಲ್ಲಿ ನಿಲ್ಲಲು ಕೂಡ ನನಗೆ ಆಗುವುದಿಲ್ಲ. ನನ್ನ ಕಾಲು ಮಡಿಚಲು ಸಹ ಆಗುತ್ತಿಲ್ಲ. ಹಾಗಾಗಿ, ನಾನು ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದೇನೆ. ದಯಮಾಡಿ ನಾನು ಜೈಲಿನಲ್ಲೇ ಸಾಯಲು ಬಿಡಿ” ಎಂದು ನ್ಯಾಯಾಧೀಶರ ಎದುರು ನರೇಶ್‌ ಗೋಯಲ್‌ ಬಿಕ್ಕಳಿಸಿ ಅತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂಬೈನ್‌ ಅರ್ಥುರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನರೇಶ್‌ ಗೋಯಲ್‌ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೇ ಅರ್ಜಿಯ ವಿಚಾರಣೆಗಾಗಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ ಅವರು ನ್ಯಾಯಾಲಯದಲ್ಲೇ ಬಿಕ್ಕಳಿಸಿ ಅತ್ತಿದ್ದಾರೆ. ನರೇಶ್‌ ಗೋಯಲ್‌ ಅಳಲು ಆಲಿಸಿದ ನ್ಯಾಯಾಧೀಶರು, “ನರೇಶ್‌ ಗೋಯಲ್‌ ಅವರಿಗೆ ನೆರವು ಬೇಕಾಗಿದೆ. ಅವರು ಎದ್ದು ನಿಲ್ಲಲು ಸಹ ಆಗುತ್ತಿಲ್ಲ” ಎಂದರು.

ಏನಿದು ಪ್ರಕರಣ?

ನರೇಶ್‌ ಗೋಯಲ್‌ ಅವರು ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದು, ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಎದುರಿಸುತ್ತಿದ್ದು, ಇವರ ವಿರುದ್ಧ ಇ.ಡಿ ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನರೇಶ್‌ ಗೋಯಲ್‌ ಅವರನ್ನು ಬಂಧಿಸಲಾಗಿದ್ದು, ಅವರೀಗ ಮುಂಬೈ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. 

ಇದನ್ನೂ ಓದಿ: Jet Airways: ಕೆನರಾ ಬ್ಯಾಂಕ್​ಗೆ 538 ಕೋಟಿ ರೂ. ವಂಚನೆ; ಜೆಟ್​ ಏರ್​ ವೇ ಸಂಸ್ಥಾಪಕನ ವಿರುದ್ಧ ಸಿಬಿಐ ತನಿಖೆ ಪ್ರಾರಂಭ

1992ರಿಂದ ಪ್ರಾರಂಭವಾದ ಜೆಟ್​ ಏರ್​ ವೇಸ್‌, ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಖಾಸಗಿ ಏರ್​ಲೈನ್​ ಆಗಿತ್ತು. ಲಾಭದಲ್ಲೇ ನಡೆಯುತ್ತಿತ್ತು. ಆದರೆ 2019ರಲ್ಲಿ ಕಂಪನಿ ದಿವಾಳಿ ಘೋಷಣೆ ಮಾಡಿದ್ದಲ್ಲದೆ, ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು. 2021ರ ಜೂನ್​​ನಲ್ಲಿ ಜೆಟ್ ಏರ್​ ವೇ ಸ್‌ಅನ್ನು ಜಲನ್-ಕಾಲ್ರಾಕ್ ಒಕ್ಕೂಟ ಸ್ವಾಧೀನ ಪಡಿಸಿಕೊಂಡಿತು. ಅಲ್ಲದೆ, ಮತ್ತೆ ಜೆಟ್‌ ಏರ್‌ವೇಸ್‌ ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಜೆಟ್‌ ಏರ್‌ವೇಸ್‌, ನರೇಶ್ ಗೋಯಲ್‌‌ ಹಾಗೂ ಅವರ ಸಂಬಂಧಿಕರಿಗೆ ಸೇರಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version