ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದರು. ಇದೇ ವೇಳೆ ನೀಟ್ ಅಕ್ರಮದ (NEET 2024) ಕುರಿತು ಕೂಡ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ನೀಟ್ ಪರೀಕ್ಷಾ ಕುರಿತು ಪ್ರತಿಪಕ್ಷಗಳು ಸಂಸತ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನರೇಂದ್ರ ಮೋದಿ ಅವರು ನೀಟ್ ಕುರಿತು ಮಾತನಾಡಿದರು.
“ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯೋಚಿಸಬೇಕಾದ ಅವಶ್ಯಕತೆ ಇಲ್ಲ” ಎಂದು ಹೇಳಿದರು.
No injustice will be tolerated: PM Modi on NEET #neet #pmmodi #ParliamnetSession2024 @PMOIndia @narendramodi @ombirlakota
— DD India (@DDIndialive) July 2, 2024
WATCH Live: https://t.co/Df7cCSKz54 pic.twitter.com/mH2SyXukv7
ಲೋಕಸಭೆ ಚುನಾವಣೆ ಗೆಲುವಿನ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.
ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ.
“ಮುಂದಿನ 5 ವರ್ಷಗಳಲ್ಲಿ ನಾವು ನಮ್ಮ ಹಿಂದಿನ ಎಲ್ಲ ರೆಕಾರ್ಡ್‌ಗಳನ್ನು ಮುರಿಯುತ್ತೇವೆ. ಇನ್ನೂ ಮೂರು ಕೋಟಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ದೇಶದ ಬಡವರು, ರೈತರು, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತೇವೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಲ್ಲಿ ಆಡಳಿತ ನಡೆಸುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ