ಅಹಮದಾಬಾದ್: ಖ್ಯಾತ ಚಹಾ ಕಂಪನಿ ವಾಘ್ ಬಕ್ರಿಯ (Wagh Bakri) ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ (Parag Desai) ಅವರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬೀದಿ ನಾಯಿಗಳ ದಾಳಿಗೆ ಪರಾಗ್ ದೇಸಾಯಿ ಸಾವಿಗೀಡಾಗಿದ್ದಾರೆ ಎಂಬ ವರದಿಯ ಬೆನ್ನಲ್ಲೇ, ಅವರ ದೇಹದ ಮೇಲೆ ನಾಯಿ ಕಚ್ಚಿದ ಒಂದೂ ಗುರುತಿಲ್ಲ ಎಂದು ಕಂಪನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅವರು ನಾಯಿ ಕಚ್ಚಿ ಮೃತಪಟ್ಟಿಲ್ಲ ಎಂದು ಚಿಕಿತ್ಸೆ ನೀಡಿದ ಆಸ್ಪತ್ರೆಯೂ ಸ್ಪಷ್ಟನೆ ನೀಡಿದೆ.
“ಪರಾಗ್ ದೇಸಾಯಿ ಅವರ ದೇಹದ ಮೇಲೆ ನಾಯಿ ಕಚ್ಚಿರುವ ಒಂದೇ ಒಂದು ಗುರುತು ಇಲ್ಲ. ತಲೆಗೆ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಅಕ್ಟೋಬರ್ 15ರಂದು ಅವರು ಅಹಮದಾಬಾದ್‌ನಲ್ಲಿರುವ ತಮ್ಮ ನಿವಾಸದ ಬಳಿ ವಾಕಿಂಗ್ ಮಾಡುವಾಗ ಬಿದ್ದಿದ್ದಾರೆ. ಅವರ ದೇಹದ ಮೇಲೆ ಕಚ್ಚಿದ ಗುರುತಿಲ್ಲ” ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಾಗ್ ದೇಸಾಯಿ ಅವರು ವಾಕಿಂಗ್‌ಗೆ ಹೋದಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಇದೇ ವೇಳೆ ಅವರು ಓಡುವಾಗ ಬಿದ್ದಿದ್ದು, ಆಗ ತಲೆಗೆ ಪೆಟ್ಟಾಗಿದೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಿಂದ ಸ್ಪಷ್ಟನೆ
Shelby hospital has confirmed that Mr Parag Desai was not bitten by dogs. pic.twitter.com/8iwW7Z07NU
— Abhijit Iyer-Mitra (@Iyervval) October 24, 2023
ಪರಾಗ್ ದೇಸಾಯಿ ಅವರು ತಮ್ಮ ನಿವಾಸದ ಹೊರಗೆ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಬಿದ್ದಿರುವುದನ್ನು ಭದ್ರತಾ ಸಿಬ್ಬಂದಿಯು ಅವರ ಕುಟುಂಬ ಸದಸ್ಯರ ಗಮನಕ್ಕೆ ತಂದಿದ್ದರು. ನಂತರ ಅವರನ್ನು ಶೆಲ್ಬಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶೆಲ್ಬಿ ಆಸ್ಪತ್ರೆಯಲ್ಲಿ ಒಂದು ದಿನದ ನಿಗಾ ನಂತರ, ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಝೈಡಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಮೆದುಳು ರಕ್ತಸ್ರಾವಕ್ಕೆ ಒಳಗಾಗಿ ಅವರು ಭಾನುವಾರ (ಅಕ್ಟೋಬರ್ 22) ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Street Dog Attack: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಬೀದಿ ನಾಯಿಗಳಿಗೆ ಬಲಿ
ದೇಸಾಯಿ ಅವರು ವಾಘ್ ಬಕ್ರಿ ಟೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಸೇಶ್ ದೇಸಾಯಿ ಅವರ ಪುತ್ರ. ಅವರು ಪತ್ನಿ ವಿದಿಶಾ ಮತ್ತು ಮಗಳು ಪರಿಶಾ ಅವರನ್ನು ಅಗಲಿದ್ದಾರೆ. ದೇಸಾಯಿ ಅವರು 30 ವರ್ಷಗಳ ಉದ್ಯಮಶೀಲತೆಯ ಅನುಭವ ಹೊಂದಿದ್ದರು. ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್ ಅನ್ನು ಮುನ್ನಡೆಸಿದ್ದಾರೆ. ಅವರು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ನಂತಹ ಪ್ರಮುಖ ಉದ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದೇಸಾಯಿ ಅಮೆರಿಕದ ಲಾಂಗ್ ಐಲ್ಯಾಂಡ್ ವಿವಿಯಿಂದ ಎಂಬಿಎ ಪದವಿ ಪಡೆದವರು. ವಾಘ್ ಬಕ್ರಿ ಕಂಪನಿ 1500 ಕೋಟಿ ರೂ.ಗಳ ವ್ಯವಹಾರ ಹೊಂದಿದೆ.