Site icon Vistara News

ತೆಲಂಗಾಣ ರಾಜ್ಯದ ಯಾವ ಮಸೀದಿಯೂ ಹಿಂದೂ ದೇವಾಲಯ ಉರುಳಿಸಿ ಕಟ್ಟಿದ್ದಲ್ಲ ಎಂದ ಎಎಸ್‌ಐ

ಹೈದರಾಬಾದ್‌: ತೆಲಂಗಾಣದಲ್ಲಿರುವ ಯಾವುದೇ ಪ್ರಾಚೀನ ಮಸೀದಿಯೂ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಒಡೆದು ಕಟ್ಟಿದ್ದಲ್ಲ ಎಂದು ಪ್ರಾಚ್ಯ ವಸ್ತು ಇಲಾಖೆಯ ಹೈದರಾಬಾದ್‌ ವೃತ್ತ ಸ್ಪಷ್ಟಪಡಿಸಿದೆ. ದೇಶದಲ್ಲಿರುವ ಎಲ್ಲಾ ಪ್ರಮುಖ ಮಸೀದಿಗಳನ್ನು ಅಗೆದು ಶಿವಲಿಂಗ ಇದೆಯೇ ಎಂದು ಹುಡುಕಬೇಕು, ಇದ್ದರೆ ದೇವಾಲಯ ನಿರ್ಮಿಸಬೇಕು ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ ಕರೆ ನೀಡಿದ್ದರು. ಮತ್ತು ಅವರ ಶಿಷ್ಯರು ಈ ವಿಚಾರವನ್ನು ಬಲವಾಗಿ ಸಮರ್ಥಿಸಿದ್ದರು. ಇದೀಗ ಪ್ರಾಚ್ಯ ವಸ್ತು ಇಲಾಖೆ ನೀಡಿರುವ ಸ್ಪಷ್ಟನೆ ಅವರ ಉತ್ಸಾಹಕ್ಕೆ ತಣ್ಣೀರೆರಚಿದೆ.

ಮಾಹಿತಿ ಹೊರಬಿದ್ದಿದ್ದು ಹೇಗೆ?
ಮಾಹಿತಿ ಹಕ್ಕು ಕಾರ್ಯಕರ್ತ ರೋಬಿನ್‌ ಝಚ್ಚೆಯುಸ್‌ ಎಂಬವರು ಕೇಳಿದ ಮಾಹಿತಿಯನ್ನು ಆಧರಿಸಿ ಪ್ರಾಚ್ಯ ವಸ್ತು ಇಲಾಖೆ ಈ ಮಾಹಿತಿಯನ್ನು ನೀಡಿದೆ. ʻʻತೆಲಂಗಾಣ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕೇಂದ್ರ ಮತ್ತು ದೇವಸ್ಥಾನಗಳನ್ನು ಒಡೆದು ಯಾವುದಾದರೂ ಪ್ರಾಚೀನ ಮಸೀದಿಗಳನ್ನು ಕಟ್ಟಿದ ಬಗ್ಗೆ ಸಾಕ್ಷ್ಯಗಳಿವೆಯೇʼ ಎಂದು ಅವರು ಮಾಹಿತಿ ಹಕ್ಕುಗಳ ಅಡಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರಾಚ್ಯ ವಸ್ತು ಇಲಾಖೆಯ ಹೈದರಾಬಾದ್‌ ವೃತ್ತದಿಂದ ಉತ್ತರ ಬಂದಿದೆ. ತೆಲಂಗಾಣ ರಾಜ್ಯ ಹೈದರಾಬಾದ್‌ ವೃತ್ತದಡಿ ಬರುತ್ತದೆ.

ಚಾರ್‌ಮಿನಾರ್‌, ಗೋಲ್ಕೊಂಡ ಕೋಟೆ ಸೇರಿದಂತೆ ತೆಲಂಗಾಣದ ಎಂಟು ಸ್ಮಾರಕಗಳು ಎಎಸ್‌ಐ ವ್ಯಾಪ್ತಿಗೆ ಬರುತ್ತವೆ. ತೆಲಂಗಾಣ ರಾಜ್ಯದಲ್ಲಿ ಪ್ರಾಚ್ಯ ವಸ್ತು ಇಲಾಖೆ ವ್ಯಾಪ್ತಿಗೆ ಬರುವ ಯಾವುದೇ ಪ್ರಾಚೀನ ಮಸೀದಿಯನ್ನು ಯಾವುದೇ ಹಿಂದೂ ಧಾರ್ಮಿಕ ಕೇಂದ್ರದ ಮೇಲೆ ನಿರ್ಮಿಸಲಾಗಿದೆ ಎಂಬ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ಅದು ಹೇಳಿದೆ.

ತೆಲಂಗಾಣದಲ್ಲಿ ವಾರಂಗಲ್‌ ಎನ್ನುವುದು ಕಾಕತೀಯ ಸಾಮ್ರಾಜ್ಯದ ಹಳೆ ರಾಜಧಾನಿಯಾಗಿತ್ತು. ೧೪ನೇ ಶತಮಾನದಲ್ಲಿ ಈ ಸಾಮ್ರಾಜ್ಯ ಪತನಗೊಂಡಿತ್ತು. ಗೋಲ್ಕೊಂಡ ಕೋಟೆ ಮತ್ತು ಹೈದರಾಬಾದ್‌ ಕೋಟೆಗಳನ್ನು ಕುತುಬ್‌ ಷಾಹಿ ಸಾಮ್ರಾಜ್ಯ (೧೫೧೮-೧೬೮೭)ದ ಕಾಲದಲ್ಲಿ ನಿರ್ಮಿಸಲಾಗಿತ್ತು. ಹೈದರಾಬಾದ್‌ನ ನಿಜಾಮರ ಕಾಲ ೧೭೨೪ರಿಂದ ೧೯೪೮.

ಬಂಡಿ ಸಂಜಯ್‌ ಹೇಳಿದ್ದೇನು?
ಕರೀಮ್‌ ನಗರದ ಸಂಸದರೂ ಆಗಿರುವ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ ಅವರು ಕಳೆದ ತಿಂಗಳು ಹೈದರಾಬಾದ್‌ನ ಲೋಕಸಭಾ ಸದಸ್ಯ ಎಐಎಂಐಎಂ ಅಧ್ಯಕ್ಷ ಅವರಿಗೆ ಸವಾಲು ಹಾಕಿದ್ದರು. ಯಾವ್ಯಾವ ದೇವಸ್ಥಾನಗಳನ್ನು ಒಡೆದು ಯಾವ್ಯಾವ ಮಸೀದಿಗಳನ್ನು ಕಟ್ಟಲಾಗಿದೆ ಎಂದು ನೋಡೋಣವೇ ಎಂದು ಕೇಳಿದ್ದರು.

ಕಳೆದ ಮೇ ೨೫ರಂದು ಅವರು ನೀಡಿದ್ದ ಹೇಳಿಕೆ ಭಾರಿ ಸದ್ದು ಮಾಡಿತ್ತು. ʻʻರಾಜ್ಯಾದ್ಯಂತ ಮಸೀದಿಗಳನ್ನು ಅಗೆದು ನೋಡೋಣ. ಶವ ಸಿಕ್ಕಿದರೆ ಮುಸ್ಲಿಮರು ಅದನ್ನು ಇಟ್ಟುಕೊಳ್ಳಬಹುದು. ಶಿವಲಿಂಗ ಸಿಕ್ಕಿದರೆ ಅದನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕುʼʼ ಎಂದಿದ್ದರು. ಇದೀಗ ಎಎಸ್‌ಐ ಎಂಟು ಸ್ಮಾರಕಗಳನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದೆ.

ಆದರೆ, ಈಗ ಕೇವಲ ಸ್ಮಾರಕಗಳು ಮಾತ್ರವಲ್ಲ, ಬೇರೆ ಬೇರೆ ಊರಿನ ಮಸೀದಿಗಳ ಹಿನ್ನೆಲೆಯನ್ನು ಕೆದಕುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ನಡುವೆ, ಆರೆಸ್ಸೆಸ್‌ನ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರು ಈ ರೀತಿ ಎಲ್ಲಾ ಮಸೀದಿಗಳನ್ನು ಒಡೆದು ನೋಡುವ ಕೆಲಸಕ್ಕೆ ಹೋಗುವುದು ಬೇಡ. ನಮಗೆ ಬೇಕಾಗಿರುವ ಧಾರ್ಮಿಕ ಕೇಂದ್ರಗಳನ್ನು ಬಿಟ್ಟುಕೊಟ್ಟರೆ ಸಾಕು ಎಂದಿದ್ದರು.

ಇದನ್ನೂ ಓದಿ| ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌

Exit mobile version