Site icon Vistara News

Mughal History: ಉತ್ತರ ಪ್ರದೇಶದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಇನ್ನು ಮೊಘಲರ ಇತಿಹಾಸ ಇರಲ್ಲ

Yogi Adityanath waves to media in Mandya

ಲಖನೌ: ಮೊಘಲರ ಕುರಿತು ಇತಿಹಾಸದ (Mughal History) ಅಧ್ಯಯನವನ್ನು ಉತ್ತರ ಪ್ರದೇಶ ಸರ್ಕಾರ ಮೊಟಕುಗೊಳಿಸಿದೆ. ಉತ್ತರ ಪ್ರದೇಶದ ಮಂಡಳಿ ಹಾಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 12ನೇ ತರಗತಿ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಮೊಘಲರ ನ್ಯಾಯಾಲಯಗಳ ಕುರಿತು ಅಧ್ಯಯನ ಮಾಡುವುದಿಲ್ಲ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (NCERT) ಮೊಘಲ್‌ ಕೋರ್ಟ್‌ಗಳ ಕುರಿತ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಟ್ಟಿರುವ ಕಾರಣ ಅವುಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾಡುವುದಿಲ್ಲ.

“12ನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿರುವ “ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್‌ 2″ ಪುಸ್ತಕದಿಂದ ಕಿಂಗ್ಸ್‌ ಆ್ಯಂಡ್‌; ದಿ ಮೊಘಲ್‌ ಕೋರ್ಟ್ಸ್‌ (ಸಿ 16 ಹಾಗೂ 17ನೇ ಶತಮಾನಗಳು) ಎಂಬ ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ನೂತನ ಪಠ್ಯಕ್ರಮದಂತೆ ವಿದ್ಯಾರ್ಥಿಗಳು ಮೊಘಲರ ನ್ಯಾಯಾಲಯಗಳ ಕುರಿತು 2023-24ನೇ ಸಾಲಿನಿಂದ ಅಧ್ಯಯನ ಮಾಡುವುದಿಲ್ಲ” ಎಂದು ರಾಜ್ಯ ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

12ನೇ ತರಗತಿ ವಿದ್ಯಾರ್ಥಿಗಳ ಪಠ್ಯಪುಸ್ತಕದಿಂದ ಮೊಘಲ್‌ ನ್ಯಾಯಾಲಯಗಳ ಅಧ್ಯಾಯದ ಜತೆಗೆ ಅಕ್ಬರ್‌ನಾಮಾ (ಅಕ್ಬರ್‌ ಕುರಿತ ಕಾಲಾನುಕ್ರಮದ ವರದಿ), ಬಾದ್‌ಶಾ ನಾಮಾ (ಮೊಘಲ್‌ ಅರಸ ಷಹಜಹಾನ್‌ ಕಾಲಾನುಕ್ರಮಣಿಕೆ), ಮೊಘಲ್‌ ಅರಸರು, ಅವರ ಸಾಮ್ರಾಜ್ಯ, ಹಸ್ತಪ್ರತಿಗಳು, ಪ್ರಮುಖ ಪ್ರದೇಶಗಳು, ರಾಜಧಾನಿಗಳು, ರಾಯಲ್‌ ಕುಟುಂಬ, ಮೊಘಲ್‌ ಇತಿಹಾಸ, ಮೊಘಲ್‌ ಅರಸರ ಗಡಿಗಳು ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಮತ್ಯಾವ ವಿಷಯಗಳಿಗೆ ಕೊಕ್?

ಹಾಗೆಯೇ, 11ನೇ ತರಗತಿ ಪಠ್ಯಪುಸ್ತಕದಲ್ಲಿರುವ ಸೆಂಟ್ರಲ್‌ ಇಸ್ಲಾಮಿಕ್‌ ಲ್ಯಾಂಡ್ಸ್‌, ಕನ್‌ಫ್ರಂಟೇಷನ್‌ ಆಫ್‌ ಕಲ್ಚರ್ಸ್‌ ಹಾಗೂ ದಿ ಇಂಡಸ್ಟ್ರಿಯಲ್‌ ರೆವೊಲ್ಯೂಷನ್‌ ಎಂಬ ಅಧ್ಯಾಯಗಳನ್ನೂ ಕೈಬಿಡಲಾಗಿದೆ. ಆದಾಗ್ಯೂ, ಜಾಗತಿಕ ರಾಜಕೀಯ ಕ್ಷೇತ್ರದಲ್ಲಿ ಅಮೆರಿಕದ ಪ್ರಾಬಲ್ಯ, ಶೀತಲ ಸಮರದ ಕಾಲಘಟ್ಟ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಪಾತ್ರ ಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಮುಸ್ಲಿಮರ ಪ್ರದೇಶಗಳಲ್ಲಿ ರಾಮನವಮಿ ಮೆರವಣಿಗೆಯೇ ತಪ್ಪು; ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

ಅದರಂತೆ, 10ನೇ ತರಗತಿ ಪಠ್ಯದಿಂದ ಪ್ರಜಾಪ್ರಭುತ್ವ, ವೈವಿಧ್ಯತೆ, ಪ್ರಮುಖ ಹೋರಾಟಗಳು, ಸ್ವಾತಂತ್ರ್ಯ ಚಳವಳಿ, ಪ್ರಜಾಪ್ರಭುತ್ವಕ್ಕೆ ಸವಾಲುಗಳು ಸೇರಿ ಹಲವು ವಿಷಯಗಳನ್ನು ಕೈಬಿಡಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಎಡಪಂಥೀಯ ಚಿಂತನೆ ಇರುವವರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೀಗ ಮೊಘಲರ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟಿರುವ ಕುರಿತು ಪರ-ವಿರೋಧ ಚರ್ಚೆಗಳೂ ಆರಂಭವಾಗಿವೆ.

Exit mobile version