ನವದೆಹಲಿ: ಭೂಮಿಯ ಮೇಲೆ ಮನುಷ್ಯ ಮಾಡುವ ಎಲ್ಲ ತಪ್ಪು, ಪ್ರಮಾದಗಳಿಗೆ ಪ್ರಕೃತಿಯೇ ದೊಡ್ಡ ಚಿಕಿತ್ಸಕ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾತ್ರೋರಾತ್ರಿ ಸುರಿದ ಜೋರು ಮಳೆಯಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ (Delhi Air Pollution) ಪ್ರಮಾಣವು ಏಕಾಏಕಿ ಕಾರಣವಾಗಿದೆ. ಹಾಗಾಗಿ, ದೆಹಲಿಯಲ್ಲಿ ಸಮ ಬೆಸ ವಾಹನಗಳ ಓಡಾಟ ನಿಯಮ ಜಾರಿಗೆ ತರದಿರಲು ದೆಹಲಿ ಸರ್ಕಾರವು (Delhi Government) ತೀರ್ಮಾನಿಸಿದೆ. ಸಮ-ಬೆಸ ವಾಹನಗಳ ಓಡಾಟದ ಕುರಿತು ದೆಹಲಿ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ ಎಂದು ಸುಪ್ರೀಂ ಕೋರ್ಟ್ (Supreme Court) ಕೂಡ ಸ್ಪಷ್ಟಪಡಿಸಿದೆ.
“ಗಾಳಿ ಗುಣಮಟ್ಟ ಸೂಚ್ಯಂಕವು 450 (ಗಾಳಿ ಗುಣಮಟ್ಟ ಕಳಪೆ) ಇದ್ದ ಕಾರಣ ದೆಹಲಿಯಲ್ಲಿ ಸಮ ಬೆಸ ವಾಹನಗಳ ಓಡಾಟ ನಿಯಮ ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಆದರೆ, ಈಗ ಗಾಳಿ ಗುಣಮಟ್ಟ ಸೂಚ್ಯಂಕವು 300 ತಲುಪಿದೆ. ಹಾಗಾಗಿ, ನವೆಂಬರ್ 13ರಿಂದ 20ರವರೆಗೆ ಸಮ ಬೆಸ ವಾಹನಗಳ ಓಡಾಟ ನಿಯಮ ಜಾರಿಯನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಗಾಳಿಯ ಗುಣಮಟ್ಟ ಗಮನದಲ್ಲಿಟ್ಟುಕೊಂಡು ನಿಯಮ ಜಾರಿಗೆ ತರುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಪರಿಸರ ಸಚಿವ ಗೋಪಾಲ್ ರೈ ಮಾಹಿತಿ ನೀಡಿದರು.
ಇದಕ್ಕೂ ಮೊದಲು ದೆಹಲಿ ಸರ್ಕಾರವು ನವೆಂಬರ್ 13ರಿಂದ 20ರವರೆಗೆ ಸಮ-ಬೆಸ ವಾಹನಗಳ ಓಡಾಟ ನಿಯಮ ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಕೂಡ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ವಾಹನಗಳ ಲೈಸೆನ್ಸ್ ಪ್ಲೇಟ್‌ಗಳ ಮೇಲೆ ಬೆಸ ಸಂಖ್ಯೆಗಳು ಅಂದರೆ 1, 3, 5, 7 ಹಾಗೂ 9 ಇರುವ ವಾಹನಗಳು ಒಂದು ದಿನ ಹಾಗೂ ಸಮ ಸಂಖ್ಯೆಗಳು ಅಂದರೆ 0, 2, 4, 6 ಹಾಗೂ 8 ಇರುವ ವಾಹನಗಳು ಮತ್ತೊಂದು ದಿನ ಮಾತ್ರ ಓಡಾಡಲು ಅವಕಾಶ ಇರುತ್ತದೆ.
ಇದನ್ನೂ ಓದಿ: Air Pollution: ವಾಯು ಮಾಲಿನ್ಯ ಉಲ್ಬಣ; ದೆಹಲಿಯಲ್ಲಿ ಟ್ರಕ್ ಸಂಚಾರಕ್ಕೆ ಬ್ರೇಕ್, ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ
ಮಾಲಿನ್ಯಕಾರಕ ಅಂಶಗಳನ್ನು ಗುರುತಿಸುವ ‘ಪಿಎಂ 2.5’ ಕಣಗಳ ಆಧಾರದ ಮೇಲೆ ವಾಯುಮಾಲಿನ್ಯವನ್ನು ಅಂದಾಜಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಒಂದು ಘನ ಮೀಟರ್‌ಗೆ ಪಿಎಂ 2.5 ಕಣಗಳ ಮಟ್ಟವು ಒಂದು ಘನ ಮೀಟರ್‌ಗೆ 5 ಮೈಕ್ರೋ ಗ್ರಾಂ ಇರಬೇಕು. ಆದರೆ, ದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವುದಕ್ಕಿಂತ 80ರಿಂದ 100 ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಪ್ರಮಾಣವು ಮತ್ತಷ್ಟು ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ