ನವದೆಹಲಿ: ಜವಾಹರ ಲಾಲ್ ನೆಹರು ಅವರಿಂದ ಹಿಡಿದು ಸೀತಾರಾಮ್ ಕೇಸರಿ ಅವರತನಕ ಉದಾಹರಣೆ, ನಿದರ್ಶನ, ಕತೆಗಳು, ಉಪಕತೆಗಳ ಮೂಲಕ ನರೇಂದ್ರ ಮೋದಿ (Narendra Modi) ಅವರು ಸಂಸತ್‌ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್ ಗಾಂಧಿ (Rahul Gandhi), ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇನ್ನು ಭಾಷಣದ ಕೊನೆಯಲ್ಲಿ, “ನನ್ನ ದನಿ ಇನ್ನೂ ಗಟ್ಟಿ ಇದೆ. ಸಂಕಲ್ಪವೂ ಅಷ್ಟೇ ದೃಢವಾಗಿದೆ. ಈ ಮೋದಿ ಯಾರಿಗೂ ಹೆದರುವುದಿಲ್ಲ” ಎಂದು ಅಬ್ಬರಿಸಿದರು.
“ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಹೇಳಿದರು.
#WATCH | Prime Minister Narendra Modi says, "I pray to God to give them wisdom. I also hope that the 'Baalak buddhi' also gets wisdom. I express my heartfelt gratitude to the President's Address and to you for giving me time to explain in detail and nobody can suppress the voice… pic.twitter.com/oweSASBxx1
— ANI (@ANI) July 2, 2024
ನೀಟ್ ಅಕ್ರಮ ಕುರಿತು ಪ್ರಸ್ತಾಪ
ಪ್ರತಿಪಕ್ಷಗಳ ಆಗ್ರಹದ ಮಧ್ಯೆಯೇ ನರೇಂದ್ರ ಮೋದಿ ಅವರು ನೀಟ್ ಅಕ್ರಮದ ಕುರಿತು ಮಾತನಾಡಿದರು. “ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯೋಚಿಸಬೇಕಾದ ಅವಶ್ಯಕತೆ ಇಲ್ಲ” ಎಂದು ಹೇಳಿದರು.
ಲೋಕಸಭೆ ಚುನಾವಣೆ ಗೆಲುವಿನ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ