ವಿಸ್ತಾರ ನ್ಯೂಸ್ ಬೆಂಗಳೂರು: ರಾಮ ಮಂದಿರ (Ram Mandir) ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಸ್ಥಳೀಯವಾಗಿ ರಾಮ ದೇವರ ಪೂಜೆಯನ್ನು ತಡೆಯಲು ಯತ್ನಿಸಿದ್ದ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದೆ. ಸ್ಟಾಲಿನ್ ನೇತೃತ್ವದ ಸರ್ಕಾರಕ್ಕೆ ರಾಮ ಭಕ್ತಿಯನ್ನು ತಡೆಯುವ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ.
ತಮಿಳುನಾಡು ಸರ್ಕಾರ ಲೈವ್ ಪ್ರಸಾರ ಹಾಗೂ ಸಾರ್ವಜನಿಕವಾಗಿ ರಾಮದೇವರ ಪೂಜೆಯನ್ನು ಮಾಡುವುದಕ್ಕೆ ತಡೆಯಲು ಯತ್ನಿಸಿತ್ತು. ಪೊಲೀಸರಿಗೆ ಮೌಖಿಕ ಆದೇಶ ನೀಡುವ ಮೂಲಕ ಜನರಿಗೆ ಬೆದರಿಕೆ ಹಾಕುವ ಕೆಲಸ ಮಾಡಿತ್ತು. ಈ ಬಗ್ಗೆ ರಾಮ ಭಕ್ತರು ಸುಪ್ರೀಂ ಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿದ್ದರೆ, ಮದ್ರಾಸ್ ಹೈಕೋರ್ಟ್ ಮಾತಿನೇಟುಕೊಟ್ಟಿದೆ.
ಖಾಸಗಿ ದೇವಾಲಯಗಳು ಮತ್ತು ಸಭಾಂಗಣಗಳಲ್ಲಿ ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಯಾವುದೇ ಪೊಲೀಸ್ ಅನುಮತಿ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ತಮಿಳುನಾಡಿನ ಖಾಸಗಿ ಸಭಾಂಗಣಗಳಲ್ಲಿ ಅನ್ನದಾನ ಮತ್ತು ಭಜನೆಗಳನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗಾಗಿ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ವಿಶೇಷ ಅಧಿವೇಶನ ನಡೆಸಿದ ನಂತರ ಈ ತೀರ್ಪು ಬಂದಿದೆ.
ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಯಾವುದೇ ಪೊಲೀಸ್ ಅನುಮತಿ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಎಚ್ಆರ್ ಮತ್ತು ಸಿಇ ಇಲಾಖೆಯಡಿ ಬರುವ ದೇವಾಲಯಗಳಿಗೆ, ಕಾರ್ಯನಿರ್ವಾಹಕ ಅಧಿಕಾರಿಗೆ ಮುಂಚಿತವಾಗಿ ಮಾಹಿತಿ ನೀಡಿದರೆ ಸಾಕು ಎಂದು ಕೋರ್ಟ್ ಹೇಳಿದೆ.
ಅಂತಿಮವಾಗಿ ಸಂಬಂಧಪಟ್ಟ ಪ್ರತಿಯೊಬ್ಬರೂ ದೇವರ ಕಡೆಗೆ ಭಕ್ತಿ ಶಾಂತಿ ಮತ್ತು ಸಂತೋಷಕ್ಕಾಗಿ ಮಾತ್ರ ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ಸಮತೋಲನವನ್ನು ಭಂಗಗೊಳಿಸಲು ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದರು.
ಇದನ್ನೂ ಓದಿ : Ram Mandir : ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ವಿಸ್ತಾರ ನ್ಯೂಸ್ ಲೈವ್ ಕವರೇಜ್ ಇಲ್ಲಿ ನೋಡಿ
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ತಮಿಳುನಾಡು ಸರ್ಕಾರವು 2024 ರ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮಗಳ ನೇರ ಪ್ರಸಾರವನ್ನು ನಿಷೇಧಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ಮತ್ತು ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಭಾನುವಾರ (ಜನವರಿ 21) ಆರೋಪಿಸಿದ್ದರು.
ತಮಿಳುನಾಡಿನಲ್ಲಿ 200 ಕ್ಕೂ ಹೆಚ್ಚು ರಾಮನ ದೇವಾಲಯಗಳಿವೆ ಎಂದು ಅವರು ಗಮನಸೆಳೆದರು. ಆದಾಗ್ಯೂ, ಎಚ್ಆರ್ಸಿಇ ಕಾಯ್ದೆ ನಿರ್ವಹಿಸುವ ದೇವಾಲಯಗಳಲ್ಲಿ ರಾಮನ ಹೆಸರಿನಲ್ಲಿ ಯಾವುದೇ ಪೂಜೆ. ಭಜನೆ , ಪ್ರಸಾದ. ಅನ್ನದಾನಕ್ಕೆ ಅಡಚಣೆ ಮಾಡಲಾಗಿದೆ ಎಂದು ಎಕ್ಸ್ನಲ್ಲಿ ಅವರು ಪೋಸ್ಟ್ ಮಾಡಿದ್ದರು.
ನಿರ್ಮಲಾ ಆರೋಪವೇನಾಗಿತ್ತು?
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾ (Ram Mandir) ಸಮಾರಂಭದ ನೇರ ಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ರಾಜ್ಯ ಸರ್ಕಾರವು ಅಯೋಧ್ಯೆಯಲ್ಲಿ ರಾಮ ಮಂದಿರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ನಿಷೇಧ ಆದೇಶ ಹೊರಡಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ನಿರ್ಮಲಾ ಸೀತಾರಾಮನ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಶ್ರೀ ರಾಮನ 200ಕ್ಕೂ ಹೆಚ್ಚು ದೇವಾಲಯಗಳಿವೆ. ಸರ್ಕಾರದಿಂದ ನಿರ್ವಹಿಸುವ ದೇವಾಲಯಗಳಿಗೆ ಜನವರಿ 22ರಂದು ಶ್ರೀ ರಾಮನ ಹೆಸರಿನಲ್ಲಿ ವಿಶೇಷ ಪೂಜೆ , ಭಜನೆ, ಪ್ರಸಾದ, ಅನ್ನದಾನದಿಂದ ಮಾಡದದಂತೆ ಸರ್ಕಾರ ಸೂಚಿಸಿದೆ ಎಂದು ಸೀತಾರಾಮನ್ ಆರೋಪ ಮಾಡಿದ್ದಾರೆ. “ಖಾಸಗಿ ಒಡೆತನದ ದೇವಾಲಯಗಳನ್ನು ಕಾರ್ಯಕ್ರಮಗಳನ್ನು ಆಯೋಜಿಸದಂತೆ ಪೊಲೀಸರು ತಡೆಯುತ್ತಿದ್ದಾರೆ. ಅವರು ಪೆಂಡಾಲ್ ಗಳನ್ನು ಹರಿದುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ ಎಂದು ನಿರ್ಮಲಾ ಅವರು ಹೇಳಿಕೊಂಡಿದ್ದಾರೆ .