ನವದೆಹಲಿ: ತೆಲಂಗಾಣದಲ್ಲಿ ಚುನಾವಣಾ (Telangana Election) ಕಾವು ಜೋರಾಗಿದೆ. ವಿಶೇಷ ಎಂದರೆ, ‘ಕರ್ನಾಟಕ’ ಕೂಡ ಪ್ರಚಾರದ (election campaign) ವಸ್ತುವಾಗಿದೆ. ಕಾಂಗ್ರೆಸ್ (Congress Party) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ (BRS Leader KT Rama Rao) ಅವರು, ತಮ್ಮ ತವರು ರಾಜ್ಯದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರಿಗೆ ಸರಿಯಾಗಿ ವಿದ್ಯುತ್ ಪೂರೈಕ ಮಾಡಲು ಆಗುತ್ತಿಲ್ಲ. ಇಂಥ ಕಾಂಗ್ರೆಸ್ ಪಕ್ಷವೇನಾದರೂ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಯನ್ನು ನಾಶ ಮಾಡಲಿದೆ ಎಂದು ಹೇಳಿದ್ದಾರೆ.
ವಿವಿಧ ಪಕ್ಷಗಳಿದ ನಾಯಕರು ಬಿಆರ್‌ಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ ಟಿ ರಾಮರಾವ್ ಅವರು, ಪಕ್ಕದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಮತ ನೀಡಿದೆವು ಎಂದು ಪರಿತಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಪದೇ ಪದೇ ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ರೋಸಿ ಹೋದ ರೈತರು ವಿದ್ಯುತ್ ಕಂಪನಿ ಆಫೀಸಿಗೆ ಮೊಸಳೆಯನ್ನು ತಂದಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ರಾಜ್ಯ ಕರ್ನಾಟಕದಲ್ಲಿ ರೈತರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ನೀಡಿ ತಪ್ಪು ಮಾಡಿದೆವು ಎಂದು ಹೇಳುತ್ತಿದ್ದಾರೆ. ಅಂಥವರು ತೆಲಂಗಾಣದಲ್ಲಿ ಒಂದು ಅವಕಾಶವನ್ನು ನೀಡಿ ಎಂದು ಕೇಳುತ್ತಿದ್ದಾರೆ. ರೈತರು ಮೋಸ ಹೋಗಬಾರದು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: BRS MLA: ತೆಲಂಗಾಣದಲ್ಲಿ ಟಿವಿ ಲೈವ್‌ನಲ್ಲೇ ಬಿಜೆಪಿ ನಾಯಕನ ಕತ್ತು ಹಿಸುಕಿದ ಬಿಆರ್‌ಎಸ್ ಶಾಸಕ
ಬಿಆರ್‌ಎಸ್ ಸರ್ಕಾರವು ರೈತರಿಗೆ ದಿನದ 24 ಗಂಟೆ ವಿದ್ಯುತ್ ಒದಗಿಸುತ್ತಿದೆ. ಆಧರೆ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ಅವರು ರೈತರಿಗೆ ದಿನಕ್ಕೆ ಮೂರ್ನಾಲ್ಕು ಗಂಟೆ ಮಾತ್ರ ವಿದ್ಯುತ್ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ನವೆಂಬರ್ 30ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶವು ಪ್ರಕಟವಾಗಲಿದೆ.