Site icon Vistara News

K Kavitha:‌ ಕೆ. ಕವಿತಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಕಾರ; ತಪ್ಪದ ಸಂಕಷ್ಟ

K Kavitha

BRS leader K Kavitha, lodged in Tihar jail, rushed to Delhi's DDU Hospital

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ಬಂಧಿತರಾಗಿರುವ ಭಾರತ ರಾಷ್ಟ್ರ ಸಮಿತಿ (BRS) ನಾಯಕಿ, ವಿಧಾನ ಪರಿಷತ್‌ ಸದಸ್ಯೆ (MLC) ಕೆ. ಕವಿತಾ (K Kavitha) ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇ.ಡಿ ಅಧಿಕಾರಿಗಳ ಬಂಧನ, ಜಾಮೀನು ಕೋರಿ ಕೆ. ಕವಿತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಅರ್ಜಿ ತಿರಸ್ಕರಿಸಿದ್ದಲ್ಲದೆ, ಅಧೀನ ನ್ಯಾಯಾಲಯಕ್ಕೆ (Trial Court) ಅರ್ಜಿ ಸಲ್ಲಿಸುವಂತೆ ಸೂಚಿಸಿತು.

ಕೆ. ಕವಿತಾ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದರು. ಆದರೆ, ಅಧೀನ ನ್ಯಾಯಾಲಯದ ಮೊರೆ ಹೋಗಿ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು. ಆಗ ಭಾವುಕರಾದ ಕಪಿಲ್‌ ಸಿಬಲ್‌, “ಕೋರ್ಟ್‌ ಇತಿಹಾಸದಲ್ಲಿ ಇದು ಬರೆದಿಡುವಂತಹ ದಿನ. ಒಳ್ಳೆಯ ದಿನಗಳಲ್ಲ ಇವು” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌, “ತೀರ್ಮಾನ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ನೀವೊಬ್ಬ ವಕೀಲರಾಗಿ ತುಂಬ ಭಾವುಕರಾಗುವುದು, ಕೋರ್ಟ್‌ ತೀರ್ಪಿನಿಂದ ಬೇಸರ ವ್ಯಕ್ತಪಡಿಸುವುದು ಸಮಂಜಸವಲ್ಲ” ಎಂದು ಹೇಳಿತು. “ಯಾರೋ ಒಬ್ಬರು ರಾಜಕಾರಣಿಯನ್ನು ಬಂಧಿಸಿದ ತಕ್ಷಣ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೇ ಅರ್ಜಿ ಸಲ್ಲಿಸುವುದು ಸರಿಯಲ್ಲ” ಎಂದು ಕೂಡ ತಿಳಿಸಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 15ರಂದು ಹೈದರಾಬಾದ್‌ನಲ್ಲಿರುವ ಕೆ. ಕವಿತಾ ಅವರ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಸುಮಾರು 4 ತಾಸು ಪರಿಶೀಲನೆ ನಡೆಸಿದರು. ಇದಾದ ಬಳಿಕ ಅವರು ಕೆ. ಕವಿತಾ ಅವರನ್ನು ಬಂಧಿಸಿದರು. ದೆಹಲಿ ನ್ಯಾಯಾಲಯವು ಕೆ. ಕವಿತಾ ಅವರನ್ನು ಮಾರ್ಚ್‌ 23ರವರೆಗೆ ಇ.ಡಿ ಕಸ್ಟಡಿಗೆ ವಹಿಸಿದೆ. ಮಾರ್ಚ್‌ 23ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಇ.ಡಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ವಹಿಸಬೇಕು ಎಂಬುದಾಗಿ ಮನವಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Liquor Policy Case : ಆಪ್​ ನಾಯಕರಿಗೆ ಕವಿತಾ 100 ಕೋಟಿ ಲಂಚ ಕೊಟ್ಟಿದ್ದು ಹೌದು; ಇಡಿ ಮಾಹಿತಿ

ಸೌತ್‌ ಗ್ರೂಪ್‌ ಎಂಬ ಕಂಪನಿಯನ್ನು ಕೆ. ಕವಿತಾ ಸೇರಿ ಹಲವರನ್ನು ಮುನ್ನಡೆಸುತ್ತಿದ್ದು, ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ಬಳಿಕ ಇದೇ ಕಂಪನಿಗೆ ಗುತ್ತಿಗೆ ಪಡೆಯಲು ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಲಂಚ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಇ.ಡಿ ಹಾಗೂ ಸಿಬಿಐ ಕೂಲಂಕಷ ತನಿಖೆ ನಡೆಸುತ್ತಿದೆ. ಇನ್ನು. ಕೆ. ಕವಿತಾ ಅವರನ್ನು ಬಂಧಿಸುತ್ತಲೇ, ಬಿಆರ್‌ಎಸ್‌ ನಾಯಕರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿಯೇ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕೂಡ ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version