ನವದೆಹಲಿ: 16 ವರ್ಷದ ತನ್ನ ಮಾಜಿ ಗೆಳತಿಯನ್ನು 21 ಬಾರಿ ಚಾಕು ಇರಿದು ಕೊಂದ (Delhi Murder) 20 ವರ್ಷದ ಆರೋಪಿಗೆ, ತಾನು ಮಾಡಿದ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವೇ ಇಲ್ಲ! ದಿಲ್ಲಿಯ ರೋಹಿಣಿ ಶಹಾಬಾದ್ ಡೇರಿ ಪ್ರದೇಶದಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂಥ ಭಯಾನಕ ಕೊಲೆ ಘಟನೆ ನಡೆದಿದೆ. 16 ವರ್ಷದ ಹುಡುಗಿಗೆ 21 ಬಾರಿ ಚಾಕು ಇರಿದಿದ್ದು ಮಾತ್ರವಲ್ಲದೇ, ಆಕೆಯ ತಲೆಯನ್ನು ಜಜ್ಜಿ, ಕೊಲೆ ಮಾಡಿದ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸ್ ವಿಚಾರಣೆ ವೇಳೆ, ತನ್ನ ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಆರೋಪಿ ಹೇಳಿದ್ದಾನೆ. ಈ ಮಧ್ಯೆ, ಕೊಲೆ ಮಾಡುವ 1 ನಿಮಿಷಕ್ಕೂ ಮೊದಲು ಆತ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತ ನಿಂತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
16 ವರ್ಷದ ಹುಡುಗಿಯ ಕೊಲೆ ಆರೋಪಿ ಸಾಹಿಲ್‌ನನ್ನು ದಿಲ್ಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಿದ್ದರು. ವೈರಲ್ ಆಗಿರುವ ಅಪರಾಧದ ಸಿಸಿಟಿವಿ ದೃಶ್ಯಾವಳಿ ನೋಡಗರು ಎದೆಯನ್ನು ನಡುಗಿಸುವಂತಿದೆ. ಕೊಲೆ ನಡೆಯುವಾಗ ದಾರಿ ಹೋಕರು ಇದ್ದರೂ, ಅದನ್ನು ತಪ್ಪಿಸುವ ಯಾವುದೇ ಪ್ರಯತ್ನವನ್ನು ಮಾಡದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ದಿಲ್ಲಿಯ ರೋಹಿಣಿ ಕೋರ್ಟ್, ಆರೋಪಿ ಸಾಹಿಲ್‌ನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಈ ಮಧ್ಯೆ, ಕೊಲೆ ಘಟನೆಗೆ ಸಂಬಂಧಿಸಿದಂತೆ ಹೊಸ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ವೈರಲ್ ಆಗಿವೆ. ಈ ದೃಶ್ಯಾವಳಿಯಲ್ಲಿ ಆರೋಪಿ ಸಾಹಿಲ್, ಶಹಬಾದ್ ಡೈರಿ ಪ್ರದೇಶದ ಕಿರಿದಾದ ಲೇನ್‌ನಲ್ಲಿ ನಡೆಯುವುದನ್ನು ಕಾಣಬಹುದು. ಭೀಕರ ಕೊಲೆ ಮಾಡುವುದಕ್ಕಿಂತ ಒಂದು ನಿಮಿಷ ಮುಂಚೆ ಆರೋಪಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾನೆ. ಅಲ್ಲದೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತ ನಿಂತಿರುವುದನ್ನು ಕಾಣಬಹುದಾಗಿದೆ.
ನನ್ನನ್ನು ನಿರ್ಲಕ್ಷಿಸಿದ್ದರಿಂದ ಕೊಂದೆ
ಪೊಲೀಸರು ಸಾಹಿಲ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ‘ಕಳೆದ ಕೆಲವು ದಿನಗಳಿಂದ ಸಾಕ್ಷಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು. ಆಕೆಯ ನಿರ್ಲಕ್ಷ್ಯವನ್ನು ಸಹಿಸಲಾಗುತ್ತಿರಲಿಲ್ಲ. ಅದಕ್ಕೆ ಕೊಲೆ ಮಾಡಿದೆ’ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Delhi Murder: ಆಕೆಯ ನಿರ್ಲಕ್ಷ್ಯ ಸಹಿಸಲಾಗದೆ ಕೊಂದೆ; ಹಿಂದು ಬಾಲಕಿಯ ಹಂತಕ ಸಾಹಿಲ್ ಹೇಳಿಕೆ
ದೆಹಲಿಯ ಉತ್ತರ ರೋಹಿಣಿ ಪ್ರದೇಶದ ಶಹಬಾದ್ ಡೇರಿ ಎಂಬಲ್ಲಿ ಸಾಕ್ಷಿಯನ್ನು ಸಾಹಿಲ್ ಕೊಂದಿದ್ದಾನೆ. 16ವರ್ಷದ ಬಾಲಕಿ ಸಾಕ್ಷಿ ಮತ್ತು 20ವರ್ಷದ ಯುವಕ ಮೊಹಮ್ಮದ್ ಸಾಹಿಲ್ ಪ್ರೀತಿಸುತ್ತಿದ್ದರು, ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ಸಾಕ್ಷಿ ತನ್ನ ಸ್ನೇಹಿತೆಯ ಮಗನ ಹುಟ್ಟುಹಬ್ಬದ ಪಾರ್ಟಿಗೆಂದು ಆಕೆಯ ಮನೆಗೆ ಹೋಗುತ್ತಿದ್ದಳು. ಮಾರ್ಗ ಮಧ್ಯೆ ಅಡ್ಡಗಟ್ಟಿದ್ದ ಸಾಹಿಲ್ ಈ ಕೃತ್ಯ ನಡೆಸಿದ್ದಾನೆ.