ನವದೆಹಲಿ: ಜುಲೈ 22ರಿಂದ ಆಗಸ್ಟ್ 12ರವರೆಗೆ ಸಂಸತ್ ಬಜೆಟ್ ಅಧಿವೇಶನ (Parliament Session 2024) ನಡೆಯಲಿದೆ. ಜುಲೈ 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರವು ಬಜೆಟ್ ಮೂಲಕ ಜನರ ಗಮನ ಸೆಳೆಯಲು ಸಜ್ಜಾಗಿದ್ದರೆ, ಬೆಲೆಯೇರಿಕೆ, ನೀಟ್ ಹಗರಣ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ. ಇದರ ಬೆನ್ನಲ್ಲೇ, ಅಧಿವೇಶನದ ವೇಳೆ ವಂದೇ ಮಾತರಂ, ಜೈ ಹಿಂದ್ ಸೇರಿ ಹಲವು ಘೋಷಣೆಗಳನ್ನು ಕೂಗದಂತೆ ಉಭಯ ಸದನಗಳ ಸದಸ್ಯರಿಗೆ ಸೂಚಿಸಲಾಗಿದೆ.
ಘೋಷಣೆಗಳನ್ನು ಕೂಗಬಾರದು ಎಂದು ರಾಜ್ಯಸಭೆಯ ಸಭಾಧ್ಯಕ್ಷರು ಜುಲೈ 15ರಂದೇ ಬುಲೆಟಿನ್ ಹೊರಡಿಸಿದ್ದಾರೆ. “ಸದನದ ಕಾರ್ಯಕಲಾಪಗಳ ಶಿಸ್ತು, ಪ್ರಕ್ರಿಯೆ ಹಾಗೂ ಶಿಷ್ಟಾಚಾರಗಳನ್ನು ಪಾಲಿಸುವ ದೃಷ್ಟಿಯಿಂದ ಹಲವು ಘೋಷಣೆಗಳನ್ನು ಸದಸ್ಯರು ಕೂಗಬಾರದು. ಥ್ಯಾಂಕ್ಸ್, ಥ್ಯಾಂಕ್ ಯು, ಜೈ ಹಿಂದ್, ವಂದೇ ಮಾತರಂ ಸೇರಿ ಯಾವುದೇ ಘೋಷಣೆಗಳನ್ನು ಕೂಗಬಾರದು. ಅಧಿವೇಶನ ನಡೆಯುವಾಗ ಸದನದ ಒಳಗೆ ಹಾಗೂ ಸಂಸತ್ ಆವರಣದಲ್ಲಿಯೂ ಘೋಷಣೆಗಳನ್ನು ಕೂಗುವಂತಿಲ್ಲ” ಎಂದು ಸದಸ್ಯರಿಗೆ ಸೂಚಿಸಲಾಗಿದೆ.
ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ
ನಿರ್ಮಲಾ ಸೀತಾರಾಮನ್ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್ ಅವರು ಮುರಿಯಲಿದ್ದಾರೆ.
ಹಾಗೆಯೇ, ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಸೇರಿ ಹಲವು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದಾರೆ. “ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಹೊಸ ತೆರಿಗೆ ಸ್ಲ್ಯಾಬ್ ಘೋಷಣೆ ಮಾಡುತ್ತದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಏರಿಸುವ ಜತೆಗೆ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವವರಿಗೆ ಹಲವು ರೀತಿಯ ಡಿಡಕ್ಷನ್‌ಗಳ ಮೂಲಕ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈಗ ಇರುವ ಶೇ.30ರ ತೆರಿಗೆ ಬದಲು ಶೇ.25ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದು ಕೂಡ ಹೊಸ ಸ್ಲ್ಯಾಬ್‌ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದ್ದು, ಈ ಮೊತ್ತವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇವುಗಳ ಜತೆಗೆ ನೌಕರರ ಮನೆ ಬಾಡಿಗೆ ಭತ್ಯೆ (HRA) ಹಾಗೂ 80 ಟಿಟಿಎ ಅಡಿಯಲ್ಲಿ ಮೊತ್ತವನ್ನು 10 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಏರಿಕೆ ಮಾಡುವುದು ಸೇರಿ ಹಲವು ನಿರೀಕ್ಷೆಗಳಿವೆ.
ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?