ಇಟಾನಗರ: ಲಡಾಕ್ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮೆರೆಯುವ, ಅರುಣಾಚಲ ಪ್ರದೇಶಕ್ಕೆ ಭಾರತದ ಯಾವುದೇ ನಾಯಕರು ಭೇಟಿ ನೀಡಿದರೆ ಆಕ್ಷೇಪ ವ್ಯಕ್ತಪಡಿಸುವ ಕಪಟಿ ಚೀನಾಗೆ ಅರುಣಾಚಲ ಪ್ರದೇಶದಲ್ಲಿ ನಿಂತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. “ಭಾರತದ ಒಂದೇ ಒಂದು ಇಂಚು ಜಾಗವನ್ನೂ ಬೇರೆಯವರು ಆತಿಕ್ರಮಣ ಮಾಡಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಕಿಬಿತು ಗ್ರಾಮದಲ್ಲಿ ‘ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ’ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದರು. ಅದರಲ್ಲೂ, ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಅವರು ಭೇಟಿ ನೀಡುವ ಮುನ್ನವೇ ಚೀನಾ ತಗಾದೆ ತೆಗೆದಿತ್ತು. ಗೃಹ ಸಚಿವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ಚೀನಾ ಸಾರ್ವಭೌಮತೆಗೆ ಧಕ್ಕೆ ತಂದಂತೆ ಎಂದೆಲ್ಲ ಉದ್ಧಟತನದ ಹೇಳಿಕೆ ನೀಡಿತ್ತು. ಹಾಗಾಗಿಯೇ, ಅಮಿತ್ ಶಾ ಅವರು ಚೀನಾಗೆ ತಿರುಗೇಟು ನೀಡಿದರು.
ಅರುಣಾಚಲದಲ್ಲಿ ಅಮಿತ್ ಶಾ
“2014ಕ್ಕೂ ಮೊದಲು ಇಡೀ ಈಶಾನ್ಯ ಪ್ರದೇಶವೇ ವಿಚಲಿತಗೊಂಡಿತ್ತು. ಇಡೀ ಪ್ರದೇಶದಲ್ಲಿ ಯಾವುದೂ ಚೆನ್ನಾಗಿರಲಿಲ್ಲ. ಆದರೆ, ಕಳೆದ 9 ವರ್ಷದಲ್ಲಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಲುಕ್ ಈಸ್ಟ್ ಪಾಲಿಸಿಯಿಂದಾಗಿ ಈಗ ಈಶಾನ್ಯ ರಾಜ್ಯಗಳು ದೇಶದ ಅಭಿವೃದ್ಧಿಗೆ ಅಮೋಘ ಕೊಡುಗೆ ನೀಡುತ್ತಿವೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಉಪಟಳ ಮಾಡುತ್ತದೆ. ಹಲವು ಗ್ರಾಮಗಳ ಹೆಸರು ಬದಲಾಯಿಸುತ್ತಿದೆ. ಹಲವು ರೀತಿಯಲ್ಲಿ ಕುತಂತ್ರ ಮಾಡುತ್ತದೆ. ಆದರೆ, ಭಾರತದ ಒಂದೇ ಒಂದು ಜಾಗವನ್ನೂ ಆಕ್ರಮಣ ಮಾಡಲು ಬಿಡುವುದಿಲ್ಲ” ಎಂದು ಹೇಳಿದರು.
ಸೇನೆ, ಐಟಿಬಿಪಿ ಕೊಡುಗೆ ಸ್ಮರಣೆ
ಸೇನೆ ಹಾಗೂ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಕೂಡ ಅಮಿತ್ ಶಾ ಹೊಗಳಿದರು. “ದೇಶಾದ್ಯಂತ ಜನ ರಾತ್ರಿ ನೆಮ್ಮದಿಯಿಂದ, ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸೇನೆ ಹಾಗೂ ಐಟಿಬಿಪಿ ಪೊಲೀಸರೇ ಕಾರಣ. ಇಂದು ನಮ್ಮ ದೇಶದ ಮೇಲೆ ಯಾವುದೇ ದುಷ್ಟಶಕ್ತಿಯ (ವೈರಿರಾಷ್ಟ್ರ) ಕಣ್ಣು ಬೀಳುವುದಿಲ್ಲ ಎಂದರೆ ಅದಕ್ಕೆ ನಮ್ಮ ಸೈನಿಕರ ಪರಿಶ್ರಮ ದೊಡ್ಡದು” ಎಂದು ಬಣ್ಣಿಸಿದರು.
“ಗಡಿಯಲ್ಲಿ ಸೈನಿಕರು ಹಾಗೂ ಐಟಿಬಿಪಿ ಪೊಲೀಸರು ಕಾವಲು ಕಾಯುತ್ತಿರುತ್ತಾರೆ. ವೈರಿಗಳ ಮೇಲೆ ಇನ್ನಿಲ್ಲದ ನಿಗಾ ಇಟ್ಟಿರುತ್ತಾರೆ. ಇವರಿಂದಾಗಿಯೇ ದೇಶವು ಸುರಕ್ಷಿತವಾಗಿದೆ. ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ನಾವು ನಮ್ಮ ಸೇನೆಯ ಬಗ್ಗೆ ಹೆಮ್ಮೆಪಡಬೇಕು” ಎಂದು ಅಮಿತ್ ಶಾ ಹೇಳಿದರು. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರಿಗೆ ಸಾಂಪ್ರದಾಯಿಕ ಸ್ವಾಗತ ದೊರೆಯಿತು.
ಇದನ್ನೂ ಓದಿ: India China Conflict | ಲಡಾಕ್‌ನ ವ್ಯೂಹಾತ್ಮಕ ಸ್ಥಳಗಳಿಂದ ಸೇನೆ ವಾಪಸ್, ಭಾರತ-ಚೀನಾ ಬಿಕ್ಕಟ್ಟು ಅಂತ್ಯ?