ಮುಂಬಯಿ: ಶಿವ ಸೇನೆಯ ಚುನಾವಣಾ ಚಿಹ್ನೆಯಾದ ʼಬಿಲ್ಲು ಬಾಣʼವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಏಕನಾಥ ಶಿಂಧೆ ಅವರ ಬಣಕ್ಕೆ ನೇರ ಸವಾಲು ಎಸೆದಿದ್ದಾರೆ.
ಜೊತೆಗೆ, ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯಲಿ ಎಂದೂ ಅವರು ಸವಾಲು ಹಾಕಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಲ್ಲು ಬಾಣ ಚಿಹ್ನೆಯು ತಮ್ಮ ಬಣದಲ್ಲೇ ಉಳಿಯಲಿದೆ. ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
“ಬಂಡಾಯದ ಬಗ್ಗೆ ನನಗೆ ತಿಳಿದಿರಲಿಲ್ಲವೇ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ನನಗೆ ಅದರ ಬಗ್ಗೆ ಒಂದು ಕಲ್ಪನೆ ಇತ್ತು. ಆದರೆ ನಾನು ಅಸ್ವಸ್ಥನಾಗಿದ್ದೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ವ್ಯಕ್ತಿಗೂ ಅತ್ಯುನ್ನತ ನಂಬಿಕೆ, ಗೌರವ ನೀಡಲಾಗಿದೆʼʼ ಎಂದ ಅವರು “ಶಿವಸೇನೆ ಇದ್ದ ಜಾಗದಲ್ಲಿಯೇ ಇದೆ. ಶಿವ ಸೇನೆಯಿಂದ ಒಬ್ಬನೇ ಒಬ್ಬ ಶಾಸಕ ಇದ್ದ ಸಮಯವೂ ಇತ್ತು. ಆದರೆ ಪಕ್ಷ ಕೊನೆಗೊಂಡಿತೇ? ಪಕ್ಷ ಯಾವಾಗಲೂ ಇರುತ್ತದೆ. 15-16 ಶಾಸಕರು ಈಗಲೂ ನನ್ನೊಂದಿಗಿದ್ದಾರೆ. ನಾವು ‘ಸತ್ಯಮೇವ ಜಯತೇ’ ಎನ್ನುತ್ತೇವೆ. ನಾನು ಕಾನೂನು ಆಳ್ವಿಕೆಯಲ್ಲಿ ನಂಬಿಕೆ ಇಡುತ್ತೇನೆʼʼ ಎಂದಿದ್ದಾರೆ.
ಪ್ರಸ್ತುತ ಏಕನಾಥ ಶಿಂಧೆ ಅವರ ಬಣವನ್ನು ಸರಕಾರ ರಚನೆಗೆ ಆಹ್ವಾನಿಸಿದ್ದನ್ನು ವಿರೋಧಿಸಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟಿಗೆ ಹೋಗಿದೆ. ʼʼಇಡೀ ದೇಶ ಈ ತೀರ್ಪಿಗಾಗಿ ಕಾದಿದೆʼʼ ಎಂದಿದ್ದಾರೆ ಠಾಕ್ರೆ.
ಹೆಚ್ಚು ಶಾಸಕರನ್ನು ಹೊಂದಿರುವುದರಿಂದ, ಶಿವ ಸೇನೆಯ ಬಿಲ್ಲು ಬಾಣ ಚಿಹ್ನೆಯ ಮೇಲೆ ಶಿಂಧೆ ಬಣ ಅಧಿಪತ್ಯ ಸಾಧಿಸುವ ಸಾದ್ಯತೆಗಳು ದಟ್ಟವಾಗಿವೆ. ಅದು ಯಾರಿಗೆ ದೊರೆಯಲಿದೆ ಎಂದು ಚುನಾವಣಾ ಆಯೋಗ ನಿರ್ಧರಿಸುತ್ತದೆ.
ಇದನ್ನೂ ಓದಿ: ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?