Site icon Vistara News

Twin Towers | ಅವಳಿ ಕಟ್ಟಡಗಳ ನೆಲಸಮದ ತ್ಯಾಜ್ಯವೇ ಕುತುಬ್‌ ಮಿನಾರ್‌ಗಿಂತ ಎತ್ತರ ಇರಲಿದೆ!

Twin

ನೋಯ್ಡಾ: ಎಮರಾಲ್ಡ್‌ ಕೋರ್ಟ್‌ ಆವರಣದಲ್ಲಿರುವ ಸೂಪರ್‌ಟೆಕ್‌ನ ಅವಳಿ ಕಟ್ಟಡಗಳ (Twin Towers) ನೆಲಸಮಕ್ಕೆ ಆಗಸ್ಟ್‌ ೨೮ರ ದಿನಾಂಕ ನಿಗದಿಯಾಗಿದೆ. ಇದಕ್ಕಾಗಿ ಸುಮಾರು ೩,೭೦೦ ಕೆಜಿ ಸ್ಫೋಟಕಗಳನ್ನು ಸೋಮವಾರ ಕಟ್ಟಡದಾದ್ಯಂತ ಅಳವಡಿಸಲಾಗಿದೆ. ಆಗಸ್ಟ್‌ ೨೮ರ ಮಧ್ಯಾಹ್ನ ೨.೩೦ಕ್ಕೆ ನೆಲಸಮ ಪ್ರಕ್ರಿಯೆ ಆರಂಭವಾಗಲಿದ್ದು, ಕೆಲವೇ ಕ್ಷಣಗಳಲ್ಲಿ ಕಟ್ಟಡಗಳು ಧರೆಗುರುಳಲಿವೆ.

ಹೀಗೆ, ಕೆಲವೇ ಕ್ಷಣಗಳಲ್ಲಿ ನೆಲಸಮಗೊಳ್ಳುವ ಕಟ್ಟಡಗಳ ತ್ಯಾಜ್ಯವೇ ಕುತುಬ್‌ ಮಿನಾರ್‌ಗಿಂತ ಎತ್ತರದಲ್ಲಿ ಬೀಳಲಿದೆ ಎಂದು ವಿಶಿಷ್ಟವಾಗಿ ಹೋಲಿಕೆ ಮಾಡಲಾಗಿದೆ. ಕಟ್ಟಡಗಳ ತೆರವಿನಿಂದ ಸುಮಾರು ೫೫ ಸಾವಿರ ಟನ್ ತ್ಯಾಜ್ಯ ಹೊರಹೊಮ್ಮಲಿದ್ದು, ಇದು ಕುತುಬ್‌ ಮಿನಾರ್‌ಗಿಂತ ಎತ್ತರದಲ್ಲಿ ಬೀಳಲಿದೆ. ಹಾಗೆಯೇ, ತ್ಯಾಜ್ಯದ ವಿಲೇವಾರಿಯೂ ಸವಾಲಾಗಿದ್ದು, ಇದನ್ನು ತೆಗೆದುಕೊಂಡು ಹೋಗಿ ಸುರಿಯಲು ಐದಾರು ಎಕರೆ ಜಮೀನು ಬೇಕು. ೧,೨೦೦ರಿಂದ ೧,೩೦೦ ಟ್ರಕ್‌ಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ನೋಯ್ಡಾ ಸ್ಥಳೀಯ ಆಡಳಿತ ತಿಳಿಸಿದೆ.

ಹೇಗೆ ನಡೆಯಲಿದೆ ನೆಲಸಮ ಕಾರ್ಯ?

ಅಪೆಕ್ಸ್‌ ಕಟ್ಟಡವು ೩೨ ಮಹಡಿ ಹೊಂದಿದೆ. ಸಿಯೇನ್‌ ಕಟ್ಟಡವು ೨೯ ಮಹಡಿಗಳನ್ನು ಹೊಂದಿದೆ. ಎರಡೂ ಕಟ್ಟಡಗಳನ್ನು ಭಾರತದ ೧೦ ಹಾಗೂ ವಿದೇಶದ ೭ ಬ್ಲಾಸ್ಟರ್‌ಗಳ ಯೋಜನೆ ಅನ್ವಯ ನೆಲಸಮ ಮಾಡಲಾಗುತ್ತದೆ. ಎರಡೂ ಕಟ್ಟಡಗಳಿಗೆ ಸುಮಾರು ೯೦ ಕಾರ್ಮಿಕರು ಸ್ಫೋಟಕ ತುಂಬಲು ೯,೬೪೦ ಹೋಲ್‌ಗಳನ್ನು ಡ್ರಿಲ್‌ ಮಾಡಿದ್ದಾರೆ. ಸ್ಫೋಟಕಗಳನ್ನು ವೈರ್‌ ಕನೆಕ್ಷನ್‌ ಮೂಲಕ ಸ್ಫೋಟಗೊಳಿಸಿ, ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತದೆ. ಸ್ಫೋಟ ಆರಂಭವಾದ ೧೦ರಿಂದ ೧೨ ಸೆಕೆಂಡ್‌ಗಳಲ್ಲಿ ಎರಡೂ ಕಟ್ಟಡಗಳು ಧರೆಗುರುಳಲಿವೆ ಎಂದು ತಿಳಿದುಬಂದಿದೆ.

ಏಕೆ ನೆಲಸಮ?

ನಿಯಮಗಳನ್ನು ಗಾಳಿಗೆ ತೂರಿ ಎರಡೂ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಅಲ್ಲದೆ, ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಕಳೆದ ವರ್ಷವೇ ಆದೇಶಿಸಿತ್ತು. ಆದರೆ, ನೆಲಸಮ ವಿಳಂಬವಾಗಿತ್ತು. ಕೊನೆಗೆ ಆ.೨೮ರಂದು ನೆಲಸಮ ಮಾಡಲೇಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅದರಂತೆ, ನೆಲಸಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ಇದನ್ನೂ ಓದಿ | Hospet News | ಅಕ್ರಮವಾಗಿ ತಲೆ ಎತ್ತಿದ್ದ ಎರಡಂತಸ್ತಿನ ಕಟ್ಟಡ ನೆಲಸಮ

Exit mobile version