Site icon Vistara News

Twin Towers Demolition | 9 ಸೆಕೆಂಡ್‌ಗಳಲ್ಲಿ ನೋಯ್ಡಾದ ಅವಳಿ ಕಟ್ಟಡ ನೆಲಸಮ!

Photos

ನೋಯ್ಡಾ: ಸೆಕ್ಟರ್‌ ೯೩ ಎಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳನ್ನು (Twin Towers Demolition) ಸುಪ್ರೀಂ ಕೋರ್ಟ್‌ ಆದೇಶದಂತೆ ಭಾನುವಾರ ಮಧ್ಯಾಹ್ನ ೨.೩೧ಕ್ಕೆ ನೆಲಸಮಗೊಳಿಸಲಾಗಿದೆ. ಸುಮಾರು ೭೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಎರಡೂ ಗಗನಚುಂಬಿ ಕಟ್ಟಡಗಳನ್ನು ೨೦ ಕೋಟಿ ರೂ. ವ್ಯಯಿಸಿ, ೩,೭೦೦ ಕೆಜಿ ಸ್ಫೋಟಕಗಳನ್ನು ಬಳಸಿ ಧರೆಗುರುಳಿಸಲಾಗಿದೆ.

ಆ ಮೂಲಕ ೨೦೦೫ರಲ್ಲಿ ನಿರ್ಮಾಣಗೊಂಡಿದ್ದ ಅಪೆಕ್ಸ್‌ ಹಾಗೂ ಸೆಯೇನ್‌ ಬಹುಮಹಡಿ ಕಟ್ಟಡಗಳು ಇತಿಹಾಸದ ಪುಟ ಸೇರಿದಂತಾಗಿವೆ. ಅಪೆಕ್ಸ್‌ ಕಟ್ಟಡವು ೧೦೨ ಮೀಟರ್‌ ಎತ್ತರ ಹಾಗೂ ೩೨ ಫ್ಲೋರ್‌ಗಳನ್ನು ಹೊಂದಿತ್ತು. ಸೆಯೇನ್‌ ಕಟ್ಟಡವು ೯೫ ಮೀಟರ್‌ ಎತ್ತರ ಹಾಗೂ ೨೯ ಫ್ಲೋರ್‌ಗಳನ್ನು ಹೊಂದಿತ್ತು.

ಕಟ್ಟಡ ನೆಲಸಮಕ್ಕೆ ಮೊದಲು ಹಾಗೂ ನೆಲಸಮದ ನಂತರ.

ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಅದನ್ನು ನಿರ್ವಹಿಸಲು, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸುಮಾರು ೫೬೦ ಪೊಲೀಸರು, ೧೦೦ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸದ್ಯ ಕಟ್ಟಡ ನೆಲಸಮವಾಗಿದ್ದು, ಇದರಿಂದ ಉಂಟಾದ ವಾಯುಮಾಲಿನ್ಯ, ಅವಶೇಷಗಳ ವಿಲೇವಾರಿ, ಸ್ಥಳಾಂತರ ಮಾಡಿರುವ ಸುತ್ತಮುತ್ತಲಿನ ಜನರನ್ನು ವಾಪಸ್‌ ಕರೆತರುವುದು, ನೋಯ್ಡಾ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ಸುಗಮಗೊಳಿಸುವುದು ಸೇರಿ ಹಲವು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಭಾನುವಾರ ಸಂಜೆ ವೇಳೆಗೆ ಎಲ್ಲ ಪ್ರಕ್ರಿಯೆ ಮುಗಿಯುತ್ತದೆ ಎಂದು ತಿಳಿದುಬಂದಿದೆ.

ಜನರ ಆರೋಗ್ಯ ರಕ್ಷಣೆಗೆ ಆದ್ಯತೆ

ಕಟ್ಟಡಗಳನ್ನು ನೆಲಸಮಗೊಳಿದ ಕಾರಣ ಏಕಾಏಕಿ ಧೂಳು ಉಂಟಾಗಿದೆ. ಸ್ಫೋಟಕಗಳಿಂದಾಗಿ ಜನರ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆಯೂ ಇದೆ. ನೆಲಸಮದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ನೋಯ್ಡಾ ಆಡಳಿತವು ಮೂರು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅನುಕೂಲ ಮಾಡಿದೆ. ಸೆಕ್ಟರ್‌ ೯೩ನಲ್ಲಿರುವ ಫೆಲಿಕ್ಸ್‌, ಯಥಾರ್ಥ ಸೇರಿ ಮೂರು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಏಕೆ ನೆಲಸಮ?

ನಿಯಮಗಳನ್ನು ಗಾಳಿಗೆ ತೂರಿ ಎರಡೂ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಅಲ್ಲದೆ, ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಕಳೆದ ವರ್ಷವೇ ಆದೇಶಿಸಿತ್ತು. ಆದರೆ, ನೆಲಸಮ ವಿಳಂಬವಾಗಿತ್ತು. ಕೊನೆಗೆ ಆ.೨೮ರಂದು ನೆಲಸಮ ಮಾಡಲೇಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

ಇದನ್ನೂ ಓದಿ | Twin Towers | ಅವಳಿ ಕಟ್ಟಡಗಳ ನೆಲಸಮದ ತ್ಯಾಜ್ಯವೇ ಕುತುಬ್‌ ಮಿನಾರ್‌ಗಿಂತ ಎತ್ತರ ಇರಲಿದೆ!

Exit mobile version