ನವದೆಹಲಿ: ತಲಾ 60 ಸದಸ್ಯ ಬಲವುಳ್ಳ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸರಳ ಬಹುಮತ ಗುರಿಯನ್ನು ದಾಟಿವೆ. ಆದರೆ, ಮೇಘಾಲಯದಲ್ಲಿ ಮಾತ್ರ ಎನ್‌ಪಿಪಿ ಮುಂದಿದ್ದು, ಅತಂತ್ರ ಫಲಿತಾಂಶದ ಸುಳಿವು ದೊರೆತಿದೆ. ಈ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಏತನ್ಮಧ್ಯೆ, ಅತಂತ್ರ ಅಸೆಂಬ್ಲಿಯತ್ತ ಸಾಗುತ್ತಿರುವ ಮೇಘಾಲಯದಲ್ಲಿ ಎನ್‌ಪಿಪಿ ಮತ್ತು ಬಿಜೆಪಿ ಸೇರಿ ಸರ್ಕಾರ ರಚಿವ ಸಾಧ್ಯತೆಗಳು ದಟ್ಟವಾಗಿವೆ. ಈ ನಿಟ್ಟಿನಲ್ಲಿ ಮಾತುಕತೆಗಳೂ ನಡೆದಿವೆ ಎನ್ನಲಾಗುತ್ತಿದೆ(North East Election Results).
ತ್ರಿಪುರಾದಲ್ಲಿ ಹಾಫ್‌ವೇ ಮಾರ್ಕ್ ದಾಟಿದ ಬಿಜೆಪಿ
12 ಗಂಟೆಯವರೆಗಿನ ರಿಸಲ್ಟ್ ಪ್ರಕಾರ, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ(BJP) 32 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ, ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ 12 ಕ್ಷೇತ್ರಗಳು ಮೈನಸ್ ಆಗಿವೆ, ಇದೇ ವೇಳೆ ಎಡ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಕೂಟವು 16 ಕ್ಷೇತ್ರಗಳಲ್ಲಿ ಮುಂದಿದೆ. ತಿಪ್ರಾ 11 ಕ್ಷೇತ್ರಗಳಲ್ಲಿ ಮುಂದಿದೆ. ತ್ರಿಪುರಾದಲ್ಲಿ ಇನ್ನೂ ಯಾವ ಪಕ್ಷವು ಪೂರ್ಣ ಪ್ರಮಾಣದಲ್ಲಿ ಗೆಲುವು ದಾಖಲಿಸಿಲ್ಲ.
ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಪಕ್ಕಾ
ಮತ್ತೊಂದೆಡೆ, ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ(NDPP) ಮತ್ತು ಬಿಜೆಪಿ ಕೂಟವು ಭರ್ಜರಿ ಮುನ್ನಡೆಯೊಂದಿಗೆ ಸರ್ಕಾರ ರಚಿಸುವುದು ಪಕ್ಕಾ ಆಗುತ್ತಿದೆ. 12 ಗಂಟೆಯವರೆಗಿನ ಫಲಿತಾಂಶ ಪ್ರಕಾರ, ಎನ್‌ಡಿಪಿಪಿ ಮತ್ತ ಬಿಜೆಪಿ 38 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 3 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಅದೇ ರೀತಿ, ಎನ್‌ಪಿಎಫ್‌ಗೆ ಭಾರೀ ಹಿನ್ನಡೆಯಾಗಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಕೂಡ 2 ಕ್ಷೇತ್ರಗಳಲ್ಲಿ ಮುಂದಿದೆ. ಟಿಎಂಸಿ ಸೇರಿದಂತೆ ಇತರ ಪಕ್ಷಗಳು 18 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮೇಘಾಲಯದಲ್ಲಿ ಎನ್‌ಪಿಪಿ ಪ್ಲಸ್ ಬಿಜೆಪಿ ಸರ್ಕಾರ
ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಾಗುವತ್ತ ಮೇಘಾಲಯ ಫಲಿತಾಂಶವು ಸಾಗುತ್ತಿದೆ. 12 ಗಂಟೆಯವರೆಗಿನ ರಿಸಲ್ಟ್ ಪ್ರಕಾರ, ಹಾಲಿ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ 26 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಎನ್‌ಪಿಪಿ ಒಂದು ಕ್ಷೇತ್ರದಲ್ಲಿ ಗೆಲುವು ಕೂಡ ದಾಖಲಿಸಿದೆ. ಕಾಂಗ್ರೆಸ್ ಐದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಹಾಗಾಗಿ, ಎನ್‌ಪಿಪಿ ಮತ್ತು ಬಿಜೆಪಿ ನಡುವೆ ಮಾತುಕತೆ ನಡೆಯುತ್ತಿದ್ದು, ಈ ಎರಡೂ ಪಕ್ಷಗಳು ಸರ್ಕಾರ ರಚಿಸುವ ಸಾಧ್ಯತೆಗಳಿವೆ.