ನವದೆಹಲಿ: ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, 11 ಗಂಟೆಯ ಹೊತ್ತಿಗೆ ಸ್ವಲ್ಪ ಚಿತ್ರಣವು ಬದಲಾಗಿದೆ. ತ್ರಿಪುರಾದಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಮುನ್ನಡೆಯಲ್ಲಿದ್ದರೆ, ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ-ಬಿಜೆಪಿ ಕೂಟವು ಸ್ಪಷ್ಟವಾದ ಮುನ್ನಡೆಯನ್ನು ಕಾಯ್ದುಕೊಂಡು ಅಧಿಕಾರದ ಸನಿಹದಲ್ಲಿ ಹೋಗುತ್ತಿದೆ. ಅದೇ ರೀತಿ ಮೇಘಾಲಯದಲ್ಲಿ ಎನ್‌ಪಿಪಿ ನಿರೀಕ್ಷೆಗಿಂತ ತುಸು ಹೆಚ್ಚು ಉತ್ಸಾಹವನ್ನು ತೋರಿಸಿದೆ. ಟಿಎಂಸಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ(North East Election Results).
ಮೇಘಾಲಯದಲ್ಲಿ ಹೇಗಿದೆ ರಿಸಲ್ಟ್?
11 ಗಂಟೆಯ ಹೊತ್ತಿನ ರಿಸಲ್ಟ್ ಪ್ರಕಾರ, ಆಡಳಿತಾರೂಢ ಎನ್‌ಪಿಪಿ 22 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಭಾರತೀಯ ಜನತಾ ಪಾರ್ಟಿಯು ಏಳು ಕ್ಷೇತ್ರಗಳಲ್ಲಿ ಮುಂದಿದೆ. ಇನ್ನು ಟಿಎಂಸಿ ಸೇರಿದಂತೆ ಇತರ ಪಕ್ಷಗಳು ಒಟ್ಟು 23 ಕ್ಷೇತ್ರಗಳಲ್ಲಿ ಮುಂದಿವೆ. ಒಂದೊಮ್ಮೆ, ಇದೇ ಟ್ರೆಂಡ್ ಮುಂದುವರಿದರೆ, ಮೇಘಾಲಯ ಹಂಗ್ ಅಸೆಂಬ್ಲಿ ಫಲಿತಾಂಶವನ್ನು ಪಡೆಯಲಿದೆ. ಈಗಾಗಲೇ, ಮೇಘಾಲಯ ಸಿಎಂ, ಎನ್‌ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಬಿಜೆಪಿ ಸೇರಿದಂತೆ ಇತರ ಪಕ್ಷಗಳ ನಾಯಕರ ಜತೆ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಅಧಿಕಾರಕ್ಕೆ?
ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ(NDPP) ಮತ್ತು ಬಿಜೆಪಿ ಕೂಟವು ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದೆ. 11 ಗಂಟೆಯವರೆಗಿನ ಫಲಿತಾಂಶದ ಪ್ರಕಾರ, ಈ ಕೂಟವು ಒಟ್ಟು 36 ಕ್ಷೇತ್ರಗಳಲ್ಲಿ ಮುಂದಿದೆ. ಬಿಜೆಪಿ 20 ಮತ್ತು ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಕಾಂಗ್ರೆಸ್ ಕೂಡ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಎನ್‌ಪಿಎಫ್ ಮಾತ್ರ ಭಾರೀ ಹಿನ್ನೆಯನ್ನು ಅನುಭವಿಸುತ್ತಿದೆ. ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮುಂದಿದೆ.
ತ್ರಿಪುರಾದಲ್ಲಿ ರಿಸಲ್ಟ್ ಕುತೂಹಲ
11 ಗಂಟೆಯವರೆಗಿನ ಫಲಿತಾಂಶದ ಪ್ರಕಾರ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 30 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿವೆ. ಇದೇ ವೇಳೆ, ಎಡ ಪಕ್ಷಗಳು-ಕಾಂಗ್ರೆಸ್ 17 ಕ್ಷೇತ್ರದಲ್ಲಿ ಮತ್ತು ತಿಪ್ರಾ 12 ಕ್ಷೇತ್ರದಲ್ಲಿ ಮುಂದಿದೆ. ಇದೇ ಟ್ರೆಂಡ್ ಮುಂದುವರಿದರೆ ತ್ರಿಪುರಾ ಕೂಡ ಹಂಗ್ ಅಸೆಂಬ್ಲಿ ಆಗಬಹುದು. ಆಗ ತಿಪ್ರಾ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ.
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಒಟ್ಟು ತಲಾ 60 ಕ್ಷೇತ್ರಗಳಿದ್ದು ಸರ್ಕಾರ ರಚಿಸಲು ಯಾವುದೇ ಪಕ್ಷ ಅಥವಾ ಕೂಟವು 31 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ.