Site icon Vistara News

ಮುಂಬೈ ದಾಳಿ ಉಗ್ರ ಅಜ್ಮಲ್‌ ಕಸಬ್‌ ನಿರಪರಾಧಿ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ!

Vijay Namdevrao Wadettiwar

Not Ajmal Kasab, RSS-linked cop killed 26/11 hero: Congress leader sparks row

ಮುಂಬೈ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ವಿವಾದಗಳ ಸ್ವರೂಪ ಪಡೆದಿವೆ. ಪ್ರತಿಸ್ಪರ್ಧಿಗಳ ವಿರುದ್ಧ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್ ವಡೆತ್ತಿವಾರ್‌ (Vijay Namdevrao Wadettiwar) ಅವರು ಉಗ್ರ ಅಜ್ಮಲ್‌ ಕಸಬ್‌ (Ajmal Kasab) ಪರವಾಗಿ ಮಾತನಾಡಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

“2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ವೇಳೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ (ATS) ಮಾಜಿ ಮುಖ್ಯಸ್ಥ ಹೇಮಂತ್‌ ಕರ್ಕರೆ ಅವರು ಹುತಾತ್ಮರಾಗಿದ್ದು ಅಜ್ಮಲ್‌ ಕಸಬ್‌ ಗುಂಡಿನಿಂದ ಅಲ್ಲ. ಆರ್‌ಎಸ್‌ಎಸ್‌ ಜತೆ ಲಿಂಕ್‌ ಇರುವ ಪೊಲೀಸ್‌ ಅಧಿಕಾರಿಯೊಬ್ಬರು ಹೇಮಂತ್‌ ಕರ್ಕರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ” ಎಂಬುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರ ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ (ಇವರು ಮುಂಬೈ ದಾಳಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದವರು. ಅಜ್ಮಲ್‌ ಕಸಬ್‌ ಗಲ್ಲಿಗೇರಿಸುವಲ್ಲಿ ಇವರ ಪಾತ್ರವೂ ಇದೆ) ಉಜ್ವಲ್‌ ನಿಕಮ್‌ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್‌ ನಾಯಕ ಅಜ್ಮಲ್‌ ಕಸಬ್‌ ಪರವಾಗಿ ಮಾತನಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸರಿಯಾಗಿ ತಿರುಗೇಟು ನೀಡಿದ್ದಾರೆ.

“ಅಜ್ಮಲ್‌ ಕಸಬ್‌ಗೆ ಬಿರಿಯಾನಿ ನೀಡಲಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ ಉಜ್ವಲ್‌ ನಿಕಮ್‌ ಅವರು ಕಾಂಗ್ರೆಸ್‌ಗೆ ಮಾನಹಾನಿ ಮಾಡಿದ್ದಾರೆ. ಯಾರಾದರೂ ಕಸಬ್‌ಗೆ ಬಿರಿಯಾನಿ ಕೊಡುತ್ತಾರಾ? ಇದಾದ ಬಳಿಕ ಕುತಂತ್ರವನ್ನು ಉಜ್ವಲ್‌ ನಿಕಮ್‌ ಒಪ್ಪಿಕೊಂಡರು. ಇವರನ್ನು ಯಾರದರೂ ವಕೀಲ ಎನ್ನುತ್ತಾರಾ? ಇವರು ಎಂತಹ ವಿಶ್ವಾಸಘಾತುಕ ಇರಬಹುದು? ಹೇಮಂತ್‌ ಕರ್ಕರೆ ಅವರಿಗೆ ತಗುಲಿದ ಗುಂಡು ಆರ್‌ಎಸ್‌ಎಸ್‌ ಜತೆ ನಂಟು ಹೊಂದಿರುವ ಪೊಲೀಸ್‌ ಅಧಿಕಾರಿಯ ಗನ್‌ನಿಂದ. ಇಂತಹ ಪ್ರಕರಣದಲ್ಲಿ ಬಿಜೆಪಿಯು ದೇಶದ್ರೋಹಿ ಉಜ್ವಲ್‌ ನಿಕಮ್‌ ಅವರಿಗೆ ಟಿಕೆಟ್‌ ನೀಡಿದೆ. ಆ ಮೂಲಕ ಬಿಜೆಪಿಯು ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತದೆಯೇ” ಎಂಬುದಾಗಿ ವಿಜಯ್‌ ನಾಮದೇವರಾವ್ ವಡೆತ್ತಿವಾರ್‌‌ ಹೇಳಿದ್ದಾರೆ.

ತಿರುಗೇಟು ಕೊಟ್ಟ ಬಿಜೆಪಿ

ವಿಜಯ್‌ ನಾಮದೇವರಾವ್ ವಡೆತ್ತಿವಾರ್‌‌ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಪ್ರತಿಕ್ರಿಯಿಸಿದ್ದಾರೆ. “ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ ಅನ್ನು ಭದ್ರಪಡಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಕಾಂಗ್ರೆಸ್‌ ಹಿರಿಯ ನಾಯಕರೊಬ್ಬರು ಮುಂಬೈ ದಾಳಿಯ ಉಗ್ರನಿಗೆ ಕ್ಲೀನ್‌ ಚಿಟ್‌ ನೀಡುತ್ತಾರೆ ಎಂದರೆ ಇದಕ್ಕಿಂತಹ ಕೆಳ ಹಂತಕ್ಕೆ ಇಳಿಯಲು ಸಾಧ್ಯವಿಲ್ಲ. ಅವರ ಪ್ರಕಾರ, ಹೇಮಂತ್‌ ಕರ್ಕರೆ ಹುತಾತ್ಮರಾಗಿದ್ದು ಅಜ್ಮಲ್‌ ಕಸಬ್‌ನಿಂದ ಅಲ್ಲ ಎಂಬುದು ಅವರ ಹೇಳಿಕೆಯಾಗಿದೆ. ಹಾಗಾದರೆ, ಕಾಂಗ್ರೆಸ್‌ ಉಗ್ರರನ್ನು ಬೆಂಬಲಿಸುತ್ತದೆ ಎಂದಾಯಿತಲ್ಲವೇ” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

Exit mobile version