ಲಖನೌ: ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆ, ಪ್ರತಿಪಕ್ಷಗಳ ನಾಯಕರಿಗೆ ಇ.ಡಿ, ಸಿಬಿಐಗಳನ್ನು ಗುರಾಣಿಯಾಗಿ ಬಳಕೆ, ವಿದೇಶದಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿರುಗೇಟು ನೀಡಿದ್ದಾರೆ. “ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ. ಕುಟುಂಬ ರಾಜಕಾರಣವು ಅಳಿವಿನ ಅಂಚಿಗೆ ತಲುಪಿದೆ. ಹಾಗಾಗಿ, ಪ್ರತಿಪಕ್ಷಗಳು ಇನ್ನಿಲ್ಲದ ಆರೋಪ ಮಾಡುತ್ತಿವೆ” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ನಿನ್ನೆ (ಮಾರ್ಚ್ 6) ಸಂಸತ್ ಅಧಿವೇಶನ ಅಂತ್ಯಗೊಂಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಯಾವುದೇ ಬಜೆಟ್ ಅಧಿವೇಶನವು ಚರ್ಚೆಯೇ ಇಲ್ಲದೆ ಮುಗಿದಿರಲಿಲ್ಲ. ಆದರೆ, ಪ್ರತಿಪಕ್ಷಗಳು ಸಂಸತ್ತಿನ ಕಲಾಪ ನಡೆಯಲು ಬಿಟ್ಟಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ? ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿರುವುದೇ ಇದಕ್ಕೆ ಕಾರಣ. ರಾಹುಲ್ ಗಾಂಧಿ ಅನರ್ಹತೆ ವಿಷಯಕ್ಕಾಗಿ ಕಲಾಪ ನಡೆಯಲು ಬಿಡದ ಪ್ರತಿಪಕ್ಷಗಳನ್ನು ದೇಶದ ಜನ ಕ್ಷಮಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಮಿತ್ ಶಾ ಮಾತು
“ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಾರೆ. ಆದರೆ, ಅಪಾದಯಲ್ಲಿರುವುದು ಪ್ರಜಾಪ್ರಭುತ್ವ ಅಲ್ಲ. ನಿಮ್ಮ ಕುಟುಂಬ ಅಪಾಯದಲ್ಲಿದೆ. ಭಾರತೀಯತೆಯ ವಿಚಾರ ಅಪಾಯದಲ್ಲಿ ಇಲ್ಲ. ಕುಟುಂಬ ರಾಜಕಾರಣ, ನಿರಂಕುಶ ಪ್ರಜಾಪ್ರಭುತ್ವದ ಮನಸ್ಥಿತಿಯು ಅಪಾಯದಲ್ಲಿದೆ. ನೀವು ಜಾತಿ ರಾಜಕಾರಣ, ಕುಟುಂಬ ರಾಜಕಾರಣ ಹಾಗೂ ಓಲೈಕೆಯ ರಾಜಕಾರಣದಿಂದ ಪ್ರಜಾಪ್ರಭುತ್ವವನ್ನು ಸುತ್ತುವರಿದಿದ್ದಿರಿ. ಆದರೆ, ಇದೆಲ್ಲದಕ್ಕೂ ಮೋದಿ ಅವರು ಇತಿಶ್ರೀ ಹಾಡಿದರು. ಇದರಿಂದಾಗಿ ನೀವು ಭಯಪಡುತ್ತಿದ್ದೀರಿ” ಎಂದು ಹೇಳಿದರು.
ಬೈಗುಳಗಳ ಕೆಸರಲ್ಲಿ ಕಮಲ ಅರಳಿದೆ
“ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಎಲ್ಲಿಯೇ ಹೋಗಲಿ, ನರೇಂದ್ರ ಮೋದಿ ಅವರನ್ನು ಬೈಯುತ್ತಾರೆ. ಆದರೆ, ಇಂತಹ ಬೈಗುಳಗಳ ಕೆಸರಿನಲ್ಲಿಯೂ ದೇಶದ ಜನ ಕಮಲವನ್ನು ಅರಳಿಸಿದ್ದಾರೆ. ಮುಂದಿನ ಬಾರಿಯೂ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ” ಎಂದರು.
ಇದನ್ನೂ ಓದಿ: Amit Shah: ನಾವಂದುಕೊಂಡಿದ್ದ ಅಮಿತ್ ಶಾ ಬೇರೆಯೇ ಆಗಿದ್ದರು, ಭೇಟಿ ಬಳಿಕ ಹೊಗಳಿದ ಮುಸ್ಲಿಂ ಮುಖಂಡರು
ಇತ್ತೀಚೆಗೆ ಲಂಡನ್‌ಗೆ ತೆರಳಿದ್ದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದರು. ಅದರಲ್ಲೂ, ಅನರ್ಹತೆ ಬಳಿಕ, ಎಲ್ಲ ಪ್ರತಿಪಕ್ಷಗಳು ಒಗ್ಗೂಡಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪ್ರತಿಭಟನೆ ನಡೆಸಿವೆ. ಇದೇ ವಿಷಯವನ್ನು ಸಂಸತ್ ಬಜೆಟ್ ಅಧಿವೇಶನದಲ್ಲೂ ಪ್ರಸ್ತಾಪಿಸಿ, ಪ್ರತಿಭಟನೆ ನಡೆಸಿವೆ. ಹಾಗಾಗಿ, ಚರ್ಚೆಯೇ ನಡೆಯದೆ ಬಜೆಟ್ ಅಧಿವೇಶನವು ಅಂತ್ಯಗೊಂಡಿದೆ.