Site icon Vistara News

ನಿಮ್ಮ ನಾಯಕನ ನೋಡಲು 2000 ಜನರೂ ಬರ್ತಿಲ್ಲ ಸಿದ್ದರಾಮಯ್ಯ ಅವರೇ! ಅಸ್ಸಾಮ್ ಸಿಎಂ ಲೇವಡಿ

Not even 2000 people came to see your leader Siddaramaiah, Assam CM asked

ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರ ಆರಂಭಿಸಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ (Bharat Jodo Nyay Yatre) ಅಸ್ಸಾಮ್‌ನಲ್ಲಿ ಅಡ್ಡಿ ಎದುರಾಗಿದೆ. ಪರಿಣಾಮ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ (Assam CM himanta biswa sarma) ಮತ್ತು ರಾಹುಲ್ ಗಾಂಧಿ ನಡುವೆ ವಾಕ್ಸಮರ ಶುರುವಾಗಿದೆ. ಈ ಮಧ್ಯೆ, ಯಾತ್ರೆಗೆ ತಡೆಯೊಡ್ಡಿದ್ದನ್ನು ಖಂಡಿಸಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಹಿಮಂತ್ ಬಿಸ್ವಾ ಶರ್ಮಾ ಅವರು, ನಿಮ್ಮ ನಾಯಕನನ್ನು ನೋಡಲು 2000 ಮಂದಿಯೂ ಬಂದಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಅವರೇ, 50000 ಸಾವಿರನಾ? 500ಕ್ಕೂ ಅಧಿಕ ಕಿಲೋಮೀಟರ್ ಪ್ರಯಾಣದ ಉದ್ದಕ್ಕೂ 2,000 ಜನರು ಒಂದೇ ಸ್ಥಳದಲ್ಲಿ ಅವರನ್ನು ನೋಡಲು ಬರಲಿಲ್ಲ. ದಯವಿಟ್ಟು ನೀವು ಪೋಸ್ಟ್ ಮಾಡಿದ ವೀಡಿಯೊವನ್ನು ನೋಡಿ ಮತ್ತು ಜನರ ಸಂಖ್ಯೆಯನ್ನು ಎಣಿಸಿ ಎಂದು ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ತಮ್ಮ ಎಕ್ಸ್ ವೇದಿಕೆಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆಯುವವರು ಯಾವತ್ತಿಗೂ ಭಯ ಪಡಲಾರರು. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ನ್ಯಾಯ ಯಾತ್ರೆ ಬಿಜೆಪಿಯ ಸರ್ವಾಧಿಕಾರಿ ಸಾಮ್ರಾಜ್ಯದೊಳಗೆ ತಲ್ಲಣ ಸೃಷ್ಟಿಸಿದೆ. ಗೂಂಡಾಗಳನ್ನು ಬಿಟ್ಟು ಕಲ್ಲು ಹೊಡೆಸಿ, ಬೆದರಿಕೆ ಒಡ್ಡುವ ಮೂಲಕ ಭಾರತೀಯರ ನ್ಯಾಯದ ಕೂಗನ್ನು ಅಡಗಿಸಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರೇ ರಾಹುಲ್ ಗಾಂಧಿ ಅವರ ಜೊತೆ ನಾನಿದ್ದೇನೆ, ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವ ವರೆಗೆ ನಾವು ವಿರಮಿಸುವುದಿಲ್ಲ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.

ಸುಮ್ಮನಿದ್ರೆ ಸರಿ, ಇಲ್ಲಾಂದ್ರೆ ಅರೆಸ್ಟ್ ಮಾಡಿಸುವೆ! ರಾಹುಲ್‌ಗೆ ಅಸ್ಸಾಮ್ ಸಿಎಂ ಧಮ್ಕಿ

ಭದ್ರತಾ ಸಿಬ್ಬಂದಿ ಮೇಲೆ ದಾಳಿಗೆ ರಾಹುಲ್ ಗಾಂಧಿ (Rahul Gandhi) ಅವರು ಪ್ರಚೋದನೆ ನೀಡುತ್ತಿದ್ದಾರೆ ಆರೋಪಿಸಿರುವ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ (Assam CM Himanta Biswa Sarma) ಅವರು, ಲೋಕಸಭೆ ಎಲೆಕ್ಷನ್ ಮುಗಿದ ಬಳಿಕ ಬಂಧಿಸುವ ಬೆದರಿಕೆಯನ್ನು ಹಾಕಿದ್ದಾರೆ. ಭಾರತ ನ್ಯಾಯ ಜೋಡೋ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ ಅವರು ಪ್ರಸ್ತುತ ಅಸ್ಸಾಮ್‌ನಲ್ಲಿದ್ದಾರೆ. ಹಿಮಂತ್ ಸರ್ಕಾರವು ಯಾತ್ರೆಗೆ ತಡೆಯೊಡ್ಡುತ್ತಿದೆ ಎಂದು ರಾಹುಲ್ ಗಾಂಧಿ ಪ್ರತಿ ಆರೋಪ ಮಾಡಿದ್ದಾರೆ(Bharat Nyay Jodo Yatra).

ನಮ್ಮ ಭದ್ರತಾ ಸಿಬ್ಬಂದಿ ಜನರಿಗೆ ಸೇವೆ ಸಲ್ಲಿಸುತ್ತಾರೆ, ಹೊರತು ಯಾವುದೇ ರಾಜ ಕುಟುಂಬಕ್ಕಲ್ಲ ಎಂದು ಹಿಮಂತ್ ಬಿಸ್ವ ಶರ್ಮಾ ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿ, ಗಾಂಧಿ ಕುಟುಂಬದ ವಿರುದ್ಧ ಆರೋಪಿಸಿದ್ದಾರೆ. ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಮತ್ತು ಇನ್ನೊಬ್ಬ ಕಾಂಗ್ರೆಸ್ ನಾಯಕ ಜನಸಮೂಹವನ್ನು ಪ್ರಚೋದಿಸುವ ವೀಡಿಯೊವನ್ನು ಕೂಡ ಷೇರ್ ಮಾಡಿದ್ದಾರೆ.

2024ರ ಲೋಕಸಭಾ ಚುನಾವಣೆಯ ನಂತರ ಗಾಂಧಿ ಅವರನ್ನು ಗುವಾಹಟಿಯಲ್ಲಿ ಹಿಂಸಾಚಾರ ಮತ್ತು ಅಸಹಕಾರವನ್ನು ಪ್ರಚೋದಿಸಿದ್ದಕ್ಕಾಗಿ ಬಂಧಿಸಲಾಗುವುದು ಎಂದು ಅಸ್ಸಾಮ್ ಸಿಎಂ ಶರ್ಮಾ ಹೇಳಿದ್ದಾರೆ. ಯಾತ್ರೆ ಸಾಗುವ ರೂಟ್‌ಗೆ ಸಂಬಂಧಿಸಿದಂತೆ ಅಸ್ಸಾಮ್ ಪೊಲೀಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಅಡ್ಡಲಾಗಿಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತೆಸೆದರು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಶರ್ಮಾ ಅವರು ಸೂಚಿಸಿದ್ದಾರೆ. ಅಸ್ಸಾಮ್ ಸರ್ಕಾರವು ರ್ಯಾಲಿಯನ್ನು ವಿಫಲಗೊಳಿಸಿದೆ ಎಂದು ಹೇಳಿದರು.

ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಜಗಳವಾಡಿದ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕ್ಷುಲ್ಲಕ ಕಾರಣಕ್ಕಾಗಿ ರ್ಯಾಲಿಯನ್ನು ಗುವಾಹಟಿ ಪ್ರವೇಶಿಸಲು ಅನುಮತಿಸುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಅಸ್ಸಾಂ ಪೊಲೀಸರು, ನಗರವನ್ನು ಸುತ್ತುವ ಹೆದ್ದಾರಿಯಲ್ಲಿ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಪ್ರಮುಖ “ಭಾರತ್ ಜೋಡೋ ನ್ಯಾಯ್ ಯಾತ್ರೆ”ಗೆ ಅನುಮತಿ ನೀಡಿದ್ದರು. ವಾಸ್ತವದಲ್ಲಿ ರ್ಯಾಲಿಯನ್ನು ಗುವಾಹಟಿ ನಗರದೊಳಗೇ ನಡೆಸಲು ಕಾಂಗ್ರೆಸ್ ಉದ್ದೇಶಿಸಿತ್ತು. ಪರಿಣಾಮ ಅಸ್ಸಾಮ್ ಪೊಲೀಸ್ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷ ಉಂಟಾಗಿದೆ.

ಈ ಸುದ್ದಿಯನ್ನೂ ಓದಿ: Bharat Jodo Nayay Yatra: ಅಸ್ಸಾಂನಲ್ಲಿ ರಾಹುಲ್‌ ಯಾತ್ರೆಗೆ ತಡೆ; ಪೊಲೀಸ್-‌ ಕಾಂಗ್ರೆಸ್‌ ಕಾರ್ಯಕರ್ತರ ಚಕಮಕಿ

Exit mobile version