Site icon Vistara News

Narendra Modi: ಹೆಡ್‌ಲೈನ್‌ಗಾಗಿ ಅಲ್ಲ, ಡೆಡ್‌ಲೈನ್‌ಗಾಗಿ ಕೆಲಸ ಮಾಡುವೆ ಎಂದ ಮೋದಿ

Narendra Modi

Not headlines, I work towards deadlines: Says PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆ ಚುನಾವಣೆಗೆ (Lok Sabha Election 2024) ರಣಕಹಳೆ ಊದಿದ್ದಾರೆ. ಅದರಲ್ಲೂ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರಾದ ಕಲಬುರಗಿಯಿಂದಲೇ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಮಧ್ಯೆಯೇ, ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಂಡ ಮೋದಿ, “ನಾನು ಹೆಡ್‌ಲೈನ್‌ಗಳಿಗಾಗಿ ಕೆಲಸ ಮಾಡುವುದಿಲ್ಲ. ಡೆಡ್‌ಲೈನ್‌ ಮುಗಿಸಲು ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.

“ನಾನು 2029ರ ವೇಳೆಗೆ ದೇಶದ ಅಭಿವೃದ್ಧಿ, ಭಾರತ ಹೀಗಿರಬೇಕು ಎಂಬ ದೃಷ್ಟಿಯಲ್ಲಿ ಮಾತ್ರ ಕೆಲಸ ಮಾಡುತ್ತಿಲ್ಲ. ನನ್ನ ಗುರಿ 2029 ಅಲ್ಲ. ಅಲ್ಲಿಯವರೆಗೆ ಮಾತ್ರ ನಾನು ಆಡಳಿತ ನಡೆಸಬೇಕು ಎಂಬ ಗುರಿ ಹೊಂದಿಲ್ಲ. ಬದಲಾಗಿ, 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣವಾಗಬೇಕು. ದೇಶವು ಸರ್ವಾಂಗೀಣವಾಗಿ ಏಳಿಗೆ ಸಾಧಿಸಬೇಕು. ವಿಕಸಿತ ಭಾರತದ ಕನಸು ನನಸಾಗಲು, 2047ರ ವೇಳೆಗೆ ದೇಶವು ವಿಕಸಿತ ಭಾರತ ಎನಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಈಗಿನಿಂದಲೇ ಕೆಲಸ ಮಾಡುತ್ತಿದ್ದೇನೆ” ಎಂದು ತಿಳಿಸಿದರು.

“ಈಗ ಇಡೀ ಜಗತ್ತೇ ಅಸ್ಥಿರತೆಯ ಸುಳಿಗೆ ಸಿಲುಕಿದೆ. ಆದರೆ, ಭಾರತವು ಕ್ಷಿಪ್ರವಾಗಿ ಏಳಿಗೆ ಹೊಂದುತ್ತಿದೆ, ದಿನೇದಿನೆ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬುದೊಂದೇ ಸ್ಥಿರವಾಗಿದೆ. ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುವುದೇ ಭಾರತದ ಗುರಿಯಾಗಿದೆ. ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಬೇಕು ಎಂಬುದೇ ನಮ್ಮ ಛಲವಾಗಿದೆ. ಭಾರತದ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸಲು ಎಲ್ಲರೂ ಕೈಜೋಡಿಸೋಣ. ಒಗ್ಗೂಡಿ ಕೆಲಸ ಮಾಡುವ ಮೂಲಕ ದೇಶವನ್ನು ಏಳಿಗೆಯತ್ತ ಕೊಂಡೊಯ್ಯೋಣ” ಎಂದು ಹೇಳಿದರು.

ಇದನ್ನೂ ಓದಿ: PM Narendra Modi : ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಉಸಿರು, ಅದರ ಉಸಿರು ನಿಲ್ಲಿಸಿ: ಕಲಬುರಗಿಯಲ್ಲಿ ಮೋದಿ ಕರೆ

ಇವೆಲ್ಲ ಮೋದಿಯ ಗ್ಯಾರಂಟಿ ಎಂದ ಪ್ರಧಾನಿ

“ಇದು ಚುನಾವಣೆ ಸಮಯ. ಪ್ರಜಾಪ್ರಭುತ್ವದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ. ಇದರ ಮಧ್ಯೆಯೇ, ನಮ್ಮ ಪ್ರತಿಪಕ್ಷಗಳು ಜನರಿಗೆ ಹಲವು ಕನಸು ಬಿತ್ತುತ್ತಾರೆ. ಸಾಲು ಸಾಲು ಭರವಸೆಗಳನ್ನು ನೀಡುತ್ತಾರೆ. ಆದರೆ, ನಾನು ಕನಸಿನ ಆಚೆಗೆ ಯೋಚಿಸುತ್ತೇನೆ. ಅಭಿವೃದ್ಧಿ, ಪರಿಹಾರ, ಏಳಿಗೆಯೊಂದೇ ನನ್ನ ಧ್ಯೇಯವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಐದು ವರ್ಷಗಳಲ್ಲಿ ಅಸ್ಥಿರ ಜಗತ್ತಿನ ಮಧ್ಯೆಯೂ ಸ್ಥಿರತೆ, ದಕ್ಷತೆ ಹಾಗೂ ಬಲಿಷ್ಠ ಭಾರತದ ಕನಸು ಈಡೇರಲಿದೆ. ಇದುವೇ ಮೋದಿ ನೀಡುವ ಗ್ಯಾರಂಟಿಯಾಗಿದೆ” ಎಂದು ಪ್ರಧಾನಿ ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version