Site icon Vistara News

Kamal Haasan: ಇಂಡಿಯಾ ಒಕ್ಕೂಟಕ್ಕೆ ಕಮಲ್‌ ಹಾಸನ್‌ ಸೇರ್ಪಡೆ? ಅವರು ಹೇಳಿದ್ದಿಷ್ಟು

Kamal Haasan

Not Joined INDIA Bloc, Will Support Anyone Who Thinks About Nation: Says Kamal Haasan

ಚೆನ್ನೈ: ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇದ್ದು, ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿವೆ. ಮೈತ್ರಿ, ಒಕ್ಕೂಟ, ಪರಸ್ಪರ ಸಹಕಾರದೊಂದಿಗೆ ಸೀಟು ಹಂಚಿಕೆ ಸೇರಿ ಹಲವು ರೀತಿಯಲ್ಲಿ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, ಇಂಡಿಯಾ ಒಕ್ಕೂಟ ಸೇರ್ಪಡೆಯಾಗುವ ಕುರಿತು ನಟ, ಮಕ್ಕಳ್‌ ನೀಧಿ ಮೈಯಮ್‌ (MNM) ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ (Kamal Haasan) ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. “ನಾನು ಇಂಡಿಯಾ ಒಕ್ಕೂಟವನ್ನು ಸೇರಿಲ್ಲ” ಎಂದು ಅವರು ಹೇಳಿದ್ದಾರೆ.

ಎಂಎನ್‌ಎಂ ಪಕ್ಷ ಸ್ಥಾಪನೆಯಾಗಿ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. “ನಾನು ಇಂಡಿಯಾ ಒಕ್ಕೂಟವನ್ನು ಸೇರ್ಪಡೆಯಾಗುತ್ತಿಲ್ಲ. ಯಾರು ರಾಷ್ಟ್ರದ ಹಿತದೃಷ್ಟಿಯಿಂದ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೋ, ಅವರ ಪರವಾಗಿ ನಾವು ನಿಲ್ಲುತ್ತೇವೆ. ಸ್ಥಳೀಯ ರಾಜಕಾರಣ, ಊಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿರುವ ಸ್ಥಳೀಯ ಪಕ್ಷಗಳ ಜತೆ ನಾವು ಸೇರುವುದಿಲ್ಲ. ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರ ಪರವಾಗಿ ನಾವು ನಿಲ್ಲುತ್ತೇವೆ” ಎಂದು ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಂಎನ್‌ಎಂ ಪಕ್ಷವು ಇಂಡಿಯಾ ಒಕ್ಕೂಟವನ್ನು ಸೇರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೊದಲ ಹಂತದಲ್ಲಿ ಕೈಗೊಂಡಿದ್ದ ಭಾರತ್‌ ಜೋಡೋ ಯಾತ್ರೆಯಲ್ಲಿ ಕಮಲ್‌ ಹಾಸನ್‌ ಪಾಲ್ಗೊಂಡಿದ್ದರು. ಹಾಗಾಗಿ, ಅವರು ಇಂಡಿಯಾ ಒಕ್ಕೂಟವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ, ನಾನು ಇಂಡಿಯಾ ಒಕ್ಕೂಟವನ್ನು ಸೇರ್ಪಡೆಯಾಗಿಲ್ಲ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ. ಮತ್ತೊಂದೆಡೆ, ಲೋಕಸಭೆ ಚುನಾವಣೆಯಲ್ಲಿ ಎಂಎನ್‌ಎಂ ಪಕ್ಷವು ಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಕುರಿತು ಕಮಲ್‌ ಹಾಸನ್‌ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಇಂಡಿಯಾ ಒಕ್ಕೂಟಕ್ಕೆ ಶಾಕ್;‌ ಮೈತ್ರಿ ತೊರೆದ ನ್ಯಾಷನಲ್‌ ಕಾನ್ಫರೆನ್ಸ್, ಎನ್‌ಡಿಎ ಸೇರ್ಪಡೆ?

ಇಂಡಿಯಾ ಒಕ್ಕೂಟಕ್ಕೆ ಸಾಲು ಸಾಲು ಪೆಟ್ಟು

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಅದರಲ್ಲೂ, ನಿತೀಶ್‌ ಕುಮಾರ್‌ ಅವರ ವಿದಾಯವು ಇಂಡಿಯಾ ಒಕ್ಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಕೂಡ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version