ನವದೆಹಲಿ: ಆಧುನಿಕ ಕಾಲಘಟ್ಟದಲ್ಲಿ ದಾಂಪತ್ಯವು ಅಪಥ್ಯವಾಗುತ್ತಿದೆ, ಅನ್ಯೋನ್ಯತೆ ಕಡಿಮೆಯಾಗಿ, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಎಡವಿ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕೆಲವೊಂದು ಮದುವೆ ಒಂದು ವರ್ಷ, ಇನ್ನೂ ಕೆಲವು ಆರು ತಿಂಗಳು ಹಾಗೂ ಮತ್ತೊಂದಿಷ್ಟು ಮದುವೆಗಳು ಕೆಲವೇ ದಿನಗಳಲ್ಲಿ ಮುರಿದುಬೀಳುವ ಪ್ರಕರಣಗಳೂ ಇವೆ. ಇಂತಹ ಪರಿಸ್ಥಿತಿಯ ಮಧ್ಯೆಯೇ, ಮನುಷ್ಯರಲ್ಲಿ ಮಾತ್ರವಲ್ಲ, ಪಕ್ಷಗಳಲ್ಲೂ ವಿಚ್ಛೇದನ ಪದ್ಧತಿ (Birds Divorce) ಜಾರಿಯಲ್ಲಿದೆ ಎಂದು ತಿಳಿದುಬಂದಿದೆ. ಇದು ಅಚ್ಚರಿ ಕೂಡ ಹುಟ್ಟಿಸಿದೆ.
ಹೌದು, ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ ಎಂಬ ಜರ್ನಲ್‌ನಲ್ಲಿ ಪಕ್ಷಗಳಲ್ಲೂ ವಿಚ್ಛೇದನ ಪದ್ಧತಿ ಇದೆ ಎಂಬುದರ ಕುರಿತ ಅಧ್ಯಯನ ವರದಿ ಪ್ರಕಟವಾಗಿದೆ. ಇದನ್ನು ಗಾರ್ಡಿಯನ್ ಸುದ್ದಿಸಂಸ್ಥೆಯೂ ಪ್ರಕಟಿಸಿದೆ. ಚೀನಾ ಹಾಗೂ ಜರ್ಮನಿ ಸಂಶೋಧಕರು 232 ಪಕ್ಷಿಗಳ ತಳಿಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದು, ಹಕ್ಕಿಗಳು ಕೂಡ ಪರಸ್ಪರ ವಿಚ್ಛೇದನ ನೀಡುತ್ತವೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ವಿಚ್ಛೇದನ ಪ್ರಮಾಣ, ಮರಣ, ವಲಸೆ ಪ್ರಮಾಣ ಸೇರಿ ಹಲವು ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ಪಕ್ಷಗಳಲ್ಲಿ ವಿಚ್ಛೇದನ ಹೆಚ್ಚು?
ಪ್ಲೋವರ್ಸ್, ಸ್ವ್ಯಾಲೋ, ಮಾರ್ಟಿನ್, ಒರಿಯೋಲ್ ಹಾಗೂ ಬ್ಲ್ಯಾಕ್‌ಬರ್ಡ್‌ಗಳಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಇನ್ನು ಹಂಸಗಳು, ಗೀಸ್, ಪೆಟ್ರೆಲ್ಸ್ ಹಾಗೂ ಅಲ್ಬಾಟ್ರೋಸೆಸ್‌ಗಳಲ್ಲಿ ವಿಚ್ಛೇದನ ಪ್ರಮಾಣ ತೀವ್ರವಾಗಿ ಕಡಿಮೆ ಇದೆ. ಹಾಗೆ ನೋಡಿದರೆ, ಶೇ.90ರಷ್ಟು ಪಕ್ಷಿಗಳು ಏಕ ಪತಿ ಅಥವಾ ಏಕ ಪತ್ನಿ ಪದ್ಧತಿಯನ್ನು ಅನುಸರಿಸುತ್ತವೆ. ಆದರೆ, ಪಕ್ಷಿಗಳಲ್ಲೇ ಹೀಗೆ ಡಿವೋರ್ಸ್ ಇರುವುದು ಸಂಶೋಧಕರಿಗೂ ಅಚ್ಚರಿ ಮೂಡಿಸಿದೆ.
ವಿಚ್ಛೇದನಕ್ಕೆ ಕಾರಣಗಳೇನು?
ಪಕ್ಷಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಚ್ಛೇದನ ಆಗಲು ವಲಸೆಯೇ ಕಾರಣ ಎಂದು ವರದಿ ತಿಳಿಸಿದೆ. ಪಕ್ಷಿಗಳು ಆಹಾರವನ್ನು ಹುಡುಕಿ ತಿಂಗಳುಗಟ್ಟಲೆ ಹೆಣ್ಣು ಹಾಗೂ ಗಂಡು ಪಕ್ಷಿಗಳು ದೂರ ಇರುತ್ತವೆ. ಹೀಗೆ, ದೂರವಾದಾಗ ಬೇರೊಂದು ಪಕ್ಷಿ ಜತೆ ಸಂಬಂಧ ಏರ್ಪಟ್ಟರೆ, ಅದನ್ನೇ ವಿಚ್ಛೇದನ ಎಂಬುದಾಗಿ ಭಾವಿಸಲಾಗುತ್ತದೆ. “ಹವಾಮಾನ ಬದಲಾವಣೆಯಿಂದಾಗಿ ಪಕ್ಷಿಗಳಿಗೆ ಆಹಾರ ಸಿಗುವುದು, ಆಯಾ ಹವಾಮಾನಕ್ಕೆ ತಕ್ಕಹಾಗೆ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಪಕ್ಷಿಯು ಮತ್ತೊಂದು ಸಂಗಾತಿಯನ್ನು ಹುಡುಕುತ್ತದೆ” ಎಂದು ಜರ್ಮನಿಯ ಪಕ್ಷಿ ತಜ್ಞೆ ಜಿತನ್ ಸಾಂಗ್ ತಿಳಿಸಿದ್ದಾರೆ.