ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9ರಂದು ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ನಡೆದ ಸಂಘರ್ಷ, ಗಡಿ ಬಿಕ್ಕಟ್ಟಿನ ವಿಚಾರದ ಕುರಿತು ಮಾತನಾಡುವಾಗ ಚೀನಾ, ಸೇನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆಗೆ ಬಿಜೆಪಿಯ ಹಲವು ನಾಯಕರು ತಿರುಗೇಟು ನೀಡಿದ್ದಾರೆ. “ರಾಹುಲ್ ಗಾಂಧಿ ಅವರಿಂದ ಸೇನೆಗೆ ಅವಮಾನವಾಗಿದೆ”, “ಗಡಿಯಲ್ಲಿ ಹೆದರಲು, ಹಿಂದಡಿ ಇಡಲು ಇದು ನೆಹರು ಕಾಲದ ಭಾರತವಲ್ಲ” ಎಂಬುದು ಸೇರಿ ಹಲವು ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸೈನಿಕರ ಶೌರ್ಯ ಪ್ರಶ್ನಾತೀತ: ರಾಜನಾಥ್ ಸಿಂಗ್
“ಅದು ಗಲ್ವಾನ್ ಇರಲಿ, ತವಾಂಗ್ ಇರಲಿ, ದೇಶದ ರಕ್ಷಣೆ ವಿಚಾರದಲ್ಲಿ ಸೈನಿಕರು ತೋರುವ ಬದ್ಧತೆ, ಶೌರ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ. ರಾಹುಲ್ ಗಾಂಧಿ ಅವರು ಸರ್ಕಾರವನ್ನು ಟೀಕಿಸಲಿ. ಆದರೆ, ಸೈನಿಕರ ಬಗ್ಗೆ ಸುಳ್ಳು ಮಾತನಾಡುವುದು ಸರಿಯಲ್ಲ. ಅದು ರಾಜನೀತಿ ಎನಿಸಿಕೊಳ್ಳುವುದಿಲ್ಲ. ಸೈನಿಕರ ವಿಷಯದಲ್ಲಿ ರಾಜಕೀಯ ಕೂಡದು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕುಟುಕಿದ್ದಾರೆ.
ಇದು 1962ರ, ನೆಹರು ಕಾಲದ ಭಾರತ ಅಲ್ಲ ಎಂದ ಅನುರಾಗ್ ಠಾಕೂರ್
“ಗಡಿಯಲ್ಲಿ ಸೈನಿಕರು ಪೆಟ್ಟು ತಿನ್ನುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಚೀನಾದ ಕುರಿತು ಭೀತಿ ಇರಲು ಇದು 1962ರ, ಜವಾಹರ ಲಾಲ್ ನೆಹರು ಕಾಲದ ಭಾರತವಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ದೇಶ ಇದಾಗಿದ್ದು, ಯಾರಿಗೂ ಭೀತಿ ಇಲ್ಲ. ನಮ್ಮ ಸೈನಿಕರು ಶೌರ್ಯ ಮೆರೆಯುತ್ತಿದ್ದಾರೆ. ಅಷ್ಟಕ್ಕೂ, ಡೋಕ್ಲಾಂ ಬಿಕ್ಕಟ್ಟಿನ ವೇಳೆ ನಮ್ಮ ಯೋಧರು ಹೋರಾಡುತ್ತಿದ್ದರೆ, ಇದೇ ರಾಹುಲ್ ಗಾಂಧಿ ಚೀನಾದವರ ಜತೆಗೂಡಿ ಸೂಪ್ ಕುಡಿಯುತ್ತಿದ್ದರು” ಎಂದಿದ್ದಾರೆ.
ರಾಹುಲ್ ಗಾಂಧಿ ಪಕ್ಷಕ್ಕೆ, ದೇಶಕ್ಕೆ ಸಮಸ್ಯೆ: ಕಿರಣ್ ರಿಜಿಜು
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು ತವಾಂಗ್ ಸೆಕ್ಟರ್‌ಗೇ ಭೇಟಿ ನೀಡಿದ್ದು, ಪರಿಸ್ಥಿತಿ ತಹಬಂದಿಗೆ ಬಂದಿದೆ ಎಂದಿದ್ದಾರೆ. ಹಾಗೆಯೇ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ತವಾಂಗ್ ಗಡಿಯು ಸುರಕ್ಷಿತವಾಗಿದೆ. ದೇಶದ ಹೆಮ್ಮೆಯ ಯೋಧರನ್ನು ನಿಯೋಜಿಸಲಾಗಿದೆ. ಆದರೆ, ರಾಹುಲ್ ಗಾಂಧಿ ಅವರು ಸೇನೆಗೆ ಅವಮಾನಿಸುವ ಜತೆಗೆ ದೇಶದ ಘನತೆಗೆ ಧಕ್ಕೆ ತರುತ್ತಿದ್ದಾರೆ. ಅವರು ಕಾಂಗ್ರೆಸ್‌ಗೆ ಮಾತ್ರ ಸಮಸ್ಯೆಯಾಗಿಲ್ಲ, ದೇಶಕ್ಕೂ ಸಮಸ್ಯೆಯಾಗುತ್ತಿದ್ದಾರೆ. ನಮಗೆ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ” ಎಂದು ಟೀಕಿಸಿದ್ದಾರೆ.
ಚೀನಾದಿಂದ ದೇಣಿಗೆ ಪಡೆದಿದ್ದು ರಾಹುಲ್ ಕುಟುಂಬ ಎಂದ ಅಮಿತ್ ಮಾಳವೀಯ
“ಭಾರತದ ಯೋಧರು ಚೀನಾ ಸೈನಿಕರನ್ನು ಹೊಡೆಯುತ್ತಿರುವ ದೃಶ್ಯಗಳಿರುವ ವಿಡಿಯೊವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ನೋಡಿದ್ದಾನೆ. ಹೀಗಿದ್ದರೂ, ರಾಹುಲ್ ಗಾಂಧಿ ಅವರು ಸೈನಿಕರ ಸಮಗ್ರತೆ ಬಗ್ಗೆ ಮಾತನಾಡುತ್ತಿದ್ದಾರೆ. ಚೀನಾ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಫೌಂಡೇಷನ್‌ಗೆ ಹಣ ಬಂದಿದೆ. ಹಾಗಾಗಿಯೆ, ರಾಹುಲ್ ಗಾಂಧಿ ಚೀನಾ ಪರ ಮಾತನಾಡುತ್ತಿದ್ದಾರೆ” ಎಂದು ದೂರಿದ್ದಾರೆ.
ಇದನ್ನೂ ಓದಿ | Kiren Rijiju At Tawang | ಸಂಘರ್ಷ ನಡೆದ ಗಡಿಗೆ ಕಿರಣ್ ರಿಜಿಜು ಭೇಟಿ, ಗಡಿ ಸುರಕ್ಷಿತ ಎಂದು ಹೇಳಿಕೆ, ರಾಹುಲ್ ವಿರುದ್ಧ ವಾಗ್ದಾಳಿ