ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಬುಲ್ಡೋಜರ್‌ಗಳ ಮೂಲಕ ಮನೆಗಳನ್ನು ನೆಲಸಮಗೊಳಿಸುವ ಕುರಿತು ಟೀಕಿಸುವ ಭೋಜ್‌ಪುರಿ ಜಾನಪದ ಗೀತೆ ಹಾಡಿದ ಗಾಯಕಿ ನೇಹಾ ಸಿಂಗ್ ರಾಥೋಡ್ (Neha Singh Rathore) ಅವರಿಗೆ ಉತ್ತರ ಪ್ರದೇಶ ಪೊಲೀಸರು ಲೀಗಲ್ ನೋಟಿಸ್ ನೀಡಿದ್ದಾರೆ. ಇದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನೇಹಾ, “ಇಂತಹ ಕ್ರಮಗಳಿಗೆ ನಾನು ಹೆದರುವುದಿಲ್ಲ. ಹಾಡುವುದನ್ನು ಮುಂದುವರಿಸುತ್ತೇನೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ವೇಳೆ ಉತ್ತರ ಪ್ರದೇಶದಲ್ಲಿ ತಾಯಿ ಹಾಗೂ ಮಗಳನ್ನು ಗುಡಿಸಲಿನಲ್ಲಿಯೇ ಇರುವಾಗ ಬೆಂಕಿ ಹಚ್ಚಿ, ಅವರಿಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ನೆಲಸಮ ಕಾರ್ಯಾಚರಣೆಯನ್ನು ಟೀಕಿಸುವ ಜಾನಪದ ಹಾಡು ಹಾಡಿದ ನೇಹಾ ರಾಥೋಡ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೊ ವೈರಲ್ ಆಗಿದ್ದು, ಉತ್ತರ ಪ್ರದೇಶ ಪೊಲೀಸರು ಗಾಯಕಿಗೆ ನೋಟಿಸ್ ನೀಡಿದ್ದಾರೆ.
ನೇಹಾ ಹಾಡಿದ ಹಾಡು ಇಲ್ಲಿದೆ
“ನಾನೊಬ್ಬ ಜಾನಪದ ಕಲಾವಿದೆ. ನಾನು ಹಾಡುವುದನ್ನು ಮುಂದುವರಿಸುತ್ತೇನೆ. ನಾನು ಹಾಡಿದ ಹಾಡಿನಲ್ಲಿ ಯಾವುದೇ ತಪ್ಪಿಲ್ಲ. ಇಂತಹ ನೋಟಿಸ್‌ಗಳಿಗೆ ನಾನು ಹೆದರುವುದಿಲ್ಲ. ಕಾನೂನು ಪ್ರಕ್ರಿಯೆಗಳಿಗಾಗಿ ನನ್ನ ವಕೀಲರ ಜತೆ ಮಾತನಾಡುತ್ತೇನೆ” ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Yogi Adityanath: ಸಿಎಂ ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ದಾಳಿ ಬೆದರಿಕೆ, ಬಿಗಿ ಭದ್ರತೆ