ನವದೆಹಲಿ: ಮಾನಹಾನಿ ಪ್ರಕರಣದ ಕಾನೂನು ಹೋರಾಟದಲ್ಲಿ ಮುನ್ನಡೆ ಸಾಧಿಸಿರುವ ರಾಹುಲ್ ಗಾಂಧಿ (Rahul Gandhi) ಅವರಿಗೆ ನಾಲ್ಕು ತಿಂಗಳ ಬಳಿಕ ಸಂಸತ್ ಸದಸ್ಯತ್ವ ಸ್ಥಾನ ಲಭಿಸಿದೆ. ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ್ದ ಸೂರತ್ ನ್ಯಾಯಾಲಯದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ, ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಮತ್ತೆ ಸದಸ್ಯತ್ವ ನೀಡಲಾಗಿದೆ. ಈ ಕುರಿತು ಲೋಕಸಭೆ ಕಾರ್ಯಾಲಯವು ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಕಾಂಗ್ರೆಸ್ ನಾಯಕರಲ್ಲಿ ಸಂತಸ ಮನೆ ಮಾಡಿದೆ.
ಲೋಕಸಭೆ ಕಾರ್ಯಾಲಯ ಅಧಿಸೂಚನೆ
ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂಬುದಾಗಿ ಘೋಷಿಸಿದ ಸೂರತ್ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಿಕ್ಷೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ನಾಯಕರ ಸಂಭ್ರಮ
“ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯವು ಸರಿಯಾದ ಕಾರಣ ನೀಡಿಲ್ಲ. ಹಾಗಾಗಿ, ಶಿಕ್ಷೆಗೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಮಾರ್ಚ್ 23ರಂದು ಜೈಲು ಶಿಕ್ಷೆ ವಿಧಿಸಿತ್ತು. ಮಾರ್ಚ್ 24ರಂದು ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಮಾನಹಾನಿ ಕೇಸ್ ಶಿಕ್ಷೆಗೆ ತಡೆ, ಕೈ ನಾಯಕನಿಗೆ ಮರಳಿದ ಸಂಸದ ಸ್ಥಾನ
ಏನಿದು ಪ್ರಕರಣ?
ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಚುನಾವಣೆ ರ‍್ಯಾಲಿ ನಡೆಸಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, “ಮೋದಿ ಉಪನಾಮ ಹೊಂದಿರುವ ಎಲ್ಲರೂ ಏಕೆ ಕಳ್ಳರಾಗಿದ್ದಾರೆ” ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿರುವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಗುಜರಾತ್ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರು ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಬಳಿಕ ಸೂರತ್ ನ್ಯಾಯಾಲಯವು, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.