ಗುರುಗ್ರಾಮ: ಸ್ವಿಗ್ಗಿ, ಜೊಮ್ಯಾಟೊ ಸೇರಿ ಯಾವುದೇ ಫುಡ್ ಡೆಲಿವರಿ ಬಾಯ್‌ಗಳು ಮಹಾ ನಗರಗಳ ಟ್ರಾಫಿಕ್, ಮಳೆ, ಚಳಿ, ಬಿಸಿಲು ಎನ್ನದೆ, ಹಗಲು-ರಾತ್ರಿ ಎನ್ನದೆ ಫುಡ್ ಡೆಲಿವರಿ ಮಾಡುತ್ತಾರೆ. ಇದನ್ನು ಗಮನಿಸಿದ ಜೊಮ್ಯಾಟೊ ಕಂಪನಿಯು ತನ್ನ ಸಂಸ್ಥೆಯ ನೌಕರರು ಡ್ಯೂಟಿಯ ಮಧ್ಯೆ ಕೆಲ ಸಮಯ ವಿಶ್ರಾಂತಿ ಮಾಡಲು ನಗರಗಳಲ್ಲಿ ರೆಸ್ಟ್ ಪಾಯಿಂಟ್ಸ್ (Zomato Rest Points) ನಿರ್ಮಿಸಲು ಮುಂದಾಗಿದೆ. ಆ ಮೂಲಕ ಬಿಡುವಿಲ್ಲದೆ ಕಾರ್ಯನಿರ್ವಹಿಸುವ ನೌಕರರ ಹಿತದೃಷ್ಟಿಯಿಂದ ಮಾನವೀಯ ಮೌಲ್ಯಗಳುಳ್ಳ ಮನಸ್ಥಿತಿ ಪ್ರದರ್ಶಿಸಿದೆ.
ಇದನ್ನೂ ಓದಿ: Zomato : ಜೊಮ್ಯಾಟೊಗೆ 346 ಕೋಟಿ ರೂ. ನಷ್ಟ, 225 ನಗರಗಳಲ್ಲಿ ವ್ಯಾಪಾರ ಬಂದ್
ಹರಿಯಾಣದ ಗುರುಗ್ರಾಮ ಮೂಲದ ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಅವರು ʼದಿ ಶೆಲ್ಟರ್ ಪ್ರಾಜೆಕ್ಟ್ʼಅನ್ನು ಘೋಷಿಸಿದ್ದಾರೆ. “ನಮ್ಮ ಕಂಪನಿಯ ಡೆಲಿವರಿ ಬಾಯ್‌ಗಳು ಕಾರ್ಯಭಾರದ ಮಧ್ಯೆಯೇ ತುಸು ವಿಶ್ರಾಂತಿ ಪಡೆಯಲು ದಿ ಶೆಲ್ಟರ್ ಪ್ರಾಜೆಕ್ಟ್ ಅಡಿಯಲ್ಲಿ ರೆಸ್ಟ್ ಪಾಯಿಂಟ್ಸ್‌ಗಳನ್ನು ನಿರ್ಮಿಸಲಾಗುತ್ತಿದೆ” ಎಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕವಾಗಿ ಎರಡು ಶೆಲ್ಟರ್ ನಿರ್ಮಿಸಿ, ಅಲ್ಲಿನ ಸೌಲಭ್ಯಗಳ ಕುರಿತು ತಪಾಸಣೆ ಮಾಡಲಾಗಿದೆ. ಶೀಘ್ರದಲ್ಲಿಯೇ ಇವುಗಳನ್ನು ದೇಶಾದ್ಯಂತ ವಿಸ್ತರಿಸಲು ಕಂಪನಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ರೆಸ್ಟ್ ಪಾಯಿಂಟ್ಸ್‌ನಲ್ಲಿ ಏನೆಲ್ಲ ಸೌಲಭ್ಯ?
ಫುಡ್ ಡೆಲಿವರಿ ಮಾಡುವಾಗ ತುಸು ಬಿಡುವು ಸಿಕ್ಕರೆ, ಮಳೆ ಬಂದರೆ ವಿಶ್ರಾಂತಿ ಪಡೆಯಲು ರೆಸ್ಟ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತದೆ. ಹಾಗೆಯೇ, ಈ ಪಾಯಿಂಟ್‌ಗಳಲ್ಲಿ ಉಚಿತ ವೈಫೈ, ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಚಾರ್ಜಿಂಗ್ ಪಾಯಿಂಟ್, ಕುಳಿತು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಇರಲಿದೆ. ಪ್ರಥಮ ಚಿಕಿತ್ಸೆ ಪೆಟ್ಟಿಗೆ (First Aid Box) ಕೂಡ ಇರಲಿದೆ. ಜೊಮ್ಯಾಟೊ ಕಂಪನಿಯ ತೀರ್ಮಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.