ಪುಣೆ, ಮಹಾರಾಷ್ಟ್ರ: ವಾಹನವನ್ನೋ, ಮನೆಯನ್ನೋ ಅಥವಾ ದುಬಾರಿ ಮೊಬೈಲ್ ಫೋನ್, ಮನೆ ಸಾಮಾನಗಳನ್ನು ಇಎಂಐ ಮೂಲಕ ಖರೀದಿಸುವುದು ಸಾಮಾನ್ಯ. ಯಾಕೆಂದರ, ಒಂದೇ ಸಲ ಬೃಹತ್ ಮೊತ್ತವನ್ನು ತೆತ್ತು ಈ ಖರೀದಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಂತಿನ ಮೂಲಕ ಖರೀದಿಸುತ್ತೇವೆ. ಆದರೆ, ಮಾವಿನ ಹಣ್ಣನ್ನು ಯಾರಾದರೂ ಇಎಂಐ ಮೂಲಕ ಖರೀದಿಸುತ್ತಾರೆಯೇ ಅಥವಾ ಮಾರಾಟ ಮಾಡುತ್ತಾರೆಯೇ? ಹೌದು, ಪುಣೆಯ ವ್ಯಾಪಾರಿಯೊಬ್ಬರು ಅಲ್ಫೊನ್ಸೋ (Alphonso Mango) ಮಾವಿನ ಹಣ್ಣುಗಳನ್ನು ಕಂತಿನ (EMI) ಮೂಲಕ ಮಾರಾಟ ಮಾಡುತ್ತಿದ್ದಾರೆ!
ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಈ ಪೈಕಿ ಅಲ್ಫೊನ್ಸೋ ಮಾವು ಹಣ್ಣಗಳಿಗೆ ಬೇರೆಯದ್ದೇ ಸ್ಥಾನವಿದೆ. ಈ ಹಣ್ಣುಗಳು ದುಬಾರಿಯೂ ಹೌದು. ಮಾವಿನ ಋತು ಈಗಷ್ಟೇ ಆರಂಭವಾಗುತ್ತಿದೆ. ಅಲ್ಫೊನ್ಸೋ ಋತುವಿನ ಬಾಗಿಲು ತಟ್ಟುತ್ತಿರುವಾಗ, ಪುಣೆ ನಿವಾಸಿಗಳು ಈ ದುಬಾರಿ ಮಾವಿನ ಹಣ್ಣುಗಳನ್ನು ಖರೀದಿಸುವುದು ಹೇಗೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ, ಪುಣೆಯಲ್ಲಿ ವ್ಯಾಪಾರಿಗಳು ಈ ಹಣ್ಣನ್ನು ಇಎಂಇ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಹ್ಯಾಪಸ್ ಎಂದೂ ಕರೆಯಲಾಗುವ ಅಲ್ಫೊನ್ಸೋ ಮಾವಿನಹಣ್ಣುಗಳು ತಮ್ಮ ವಿಶಿಷ್ಟ ರುಚಿ, ಸುವಾಸನೆ ಮತ್ತು ಉತ್ತಮ ಗುಣಮಟ್ಟಕ್ಕಾಗಿ ಜಗತ್ಪ್ರಸಿದ್ಧವಾಗಿವೆ. ಅದರ ಸೊಗಸಾದ ರುಚಿ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ, ಅಲ್ಫೊನ್ಸೋ ವಿವಿಧ ವಿಧದ ಮಾವಿನಹಣ್ಣುಗಳಲ್ಲಿ ಪ್ರೀಮಿಯಂ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಇತರ ಮಾವುಗಳಿಗೆ ಹೋಲಿಸಿದರೆ, ಅಲ್ಫೊನ್ಸೋ ಮಾವು ಭಾರೀ ತುಟ್ಟಿಯಾಗಿರುತ್ತದೆ.
ಕೋವಿಡ್ ನಂತರ ಜನರು ಅಲ್ಫೊನ್ಸೋ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮಾವು ದುಬಾರಿಯಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ ನಾವು ಇಎಂಇ ಮೂಲಕ ಮಾವು ಮಾರಾಟವನ್ನು ಆರಂಭಿಸಿದ್ದೇವೆ. ಆ ಮೂಲಕ ಕಳೆದು ಹೋಗಿರುವ ಗ್ರಾಹಕರನ್ನು ವಾಪಸ್ ಕರೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿ ಇಎಂಐ ಮೂಲಕ ಅಲ್ಫೊನ್ಸೋ ಮಾವು ಖರೀದಿಸಬಹುದಾಗಿದೆ. ಅಲ್ಫೊನ್ಸೋ ಮಾವು ಡಜನ್‍ಗೆ 600ರೂ.ನಿಂದ 1300ರೂ. ವರೆಗೂ ಇದೆ ಎಂದು ಪುಣೆಯ ಮಾವು ವ್ಯಾಪಾರಿ ಗೌರವ್ ಸನಾಸ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!
ಕೋವಿಡ್‌ನಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಮಾರುಕಟ್ಟೆಗೆ ಮಾವು ಬಂದರೂ ಖರೀದಿಸುವರು ಇಲ್ಲದಾಗಿದ್ದಾರೆ. ಹಾಗಾಗಿ, ಗ್ರಾಹಕರನ್ನು ಸೆಳೆಯಲು ಮಾರಾಟಗಾರರು ನಾನು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಬಾರಿ ಮಾವು ಹೆಚ್ಚಿನ ಲಾಭವನ್ನು ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿ ಮಾವು ವ್ಯಾಪಾರಿಗಳಿದ್ದಾರೆ.