Site icon Vistara News

Joint CSIR UGC NET: ನೆಟ್‌ ಪರೀಕ್ಷೆ ರದ್ದಾದ ಬೆನ್ನಲ್ಲೇ ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ ಮುಂದೂಡಿಕೆ!

Joint CSIR UGC NET

NTA Postpones Joint CSIR-UGC-NET Examination

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಯುಜಿಸಿ ನೆಟ್‌ (ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆ ನಡೆದ ಒಂದೇ ದಿನದಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಯನ್ನೇ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ (Joint CSIR UGC NET-Council of Scientific and Industrial Research-University Grants Commission National Eligibility Test) ಪರೀಕ್ಷೆಯನ್ನು ಮುಂದೂಡಿದೆ.

ದೇಶದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಜ್ಯೂನಿಯರ್‌ ರಿಸರ್ಚ್‌ ಫೆಲೋಶಿಪ್‌ (JRF) ಪಡೆಯಲು ಹಾಗೂ ಉಪನ್ಯಾಸಕರಾಗಿ ಅಥವಾ ಸಹಾಯ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಅರ್ಹತೆ ಪಡೆಯಬೇಕಾದರೆ ಜಂಟಿ ಸಿಎಸ್‌ಐಆರ್‌ ಯುಜಿಸಿ ನೆಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಜೂನ್‌ 25 ಹಾಗೂ ಜೂನ್‌ 27ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಈಗ ಪರೀಕ್ಷೆಯನ್ನು ಮುಂದೂಡಿ ಎನ್‌ಟಿಎ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ (https://csirnet.nta.ac.in/) ಭೇಟಿ ನೀಡಿ ಎಂದು ಕೂಡ ತಿಳಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್‌ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ಎರಡು ದಿನಗಳ ಹಿಂದಷ್ಟೇ ರದ್ದುಗೊಳಿಸಿದೆ. ನ್ಯಾಷನ್‌ ಸೈಬರ್‌ ಕ್ರೈಮ್‌ ಥ್ರೆಟ್‌ ಅನಾಲಿಟಿಕ್ಸ್‌ ಯುನಿಟ್‌ ಆಫ್‌ ಇಂಡಿಯನ್‌ ಸೈಬರ್‌ ಕ್ರೈಮ್‌ ಕೋ-ಆರ್ಡಿನೇಷನ್‌ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಜೂನ್‌ 18ರಂದು ಕರ್ನಾಟಕ ಸೇರಿ ದೇಶಾದ್ಯಂತ 317 ನಗರಗಳ 1,205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 11 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೆಟ್‌ಗೆ ಹಾಜರಾಗಿದ್ದರು. ಈಗ ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌.ಡಿ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಬದಲು ಅಭ್ಯರ್ಥಿಯು ನೆಟ್‌ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲು ಯುಜಿಸಿಯು ಈಗಾಗಲೇ ಅನುಮೋದನೆ ನೀಡಿದೆ. ಹಾಗಾಗಿ, ಅಭ್ಯರ್ಥಿಗಳಿಗೆ ನೆಟ್‌ ಪ್ರಮುಖ ಸಂಗತಿಯಾಗಿದೆ.

ಇದನ್ನೂ ಓದಿ: NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Exit mobile version