Site icon Vistara News

NTA Website: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌? ಸಂಸ್ಥೆ ಹೇಳೋದಿಷ್ಟು

NTA Website

NTA rubbishes website hack reports, says all portals secure amid paper leak row

ನವದೆಹಲಿ: ದೇಶದಲ್ಲಿ ನೀಟ್‌ (NEET UG) ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಭಾರಿ ಸುದ್ದಿಯಾಗಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಿರುವ ಕೇಂದ್ರ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಇದರ ಬೆನ್ನಲ್ಲೇ, ಪರೀಕ್ಷಾ ಅಕ್ರಮಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವೆಬ್‌ಸೈಟ್‌ಅನ್ನೇ ಹ್ಯಾಕ್‌ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಎನ್‌ಟಿಎ ಸ್ಪಷ್ಟನೆ ನೀಡಿದ್ದು, “ವೆಬ್‌ಸೈಟ್‌ (NTA Website) ಹ್ಯಾಕ್‌ ಮಾಡಿಲ್ಲ. ವೆಬ್‌ಸೈಟ್‌ ಸುರಕ್ಷಿತವಾಗಿದೆ” ಎಂದು ತಿಳಿಸಿದೆ.

ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಆಗಿಲ್ಲ. ಎಲ್ಲ ಪೋರ್ಟಲ್‌ಗಳು ಸೇಫ್‌ ಆಗಿವೆ. ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ ಎಂಬ ವರದಿಗಳು ಕೇಳಿಬಂದಿದ್ದು, ಇವು ಸತ್ಯಕ್ಕೆ ದೂರವಾಗಿವೆ. ಜನರ ದಾರಿ ತಪ್ಪಿಸುವ ದಿಸೆಯಲ್ಲಿ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ” ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಎನ್‌ಟಿಎ ದೇಶದಲ್ಲಿ ನೀಟ್‌, ನೆಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ. ಎನ್‌ಟಿಎ ಅಧಿಕಾರಿಗಳು ಶಾಮೀಲಾದ ಕಾರಣವೇ ನೀಟ್‌ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ಕಾರಣಕ್ಕಾಗಿ ಎನ್‌ಟಿಎದಲ್ಲಿ ಕೆಲ ಸುಧಾರಣೆ ತರಲು ಕೇಂದ್ರ ಶಿಕ್ಷಣ ಸಚಿವಾಲಯವು ತಜ್ಞರ ಸಮಿತಿ ಕೂಡ ರಚಿಸಿದೆ.

ನೀಟ್‌ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮದ ಕುರಿತು ತನಿಖೆ ಆರಂಭಿಸಿರುವ ಸಿಬಿಐ, ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಹಾಗೆಯೇ, ಇನ್ನೂ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತಂಡಗಳು ಬಿಹಾರ ಹಾಗೂ ಗುಜರಾತ್‌ಗೆ ತೆರಳಲಿವೆ ಎಂದು ಹೇಳಲಾಗುತ್ತಿದೆ. ಇನ್ನು, ನೀಟ್‌ ಪಿಜಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಯುಜಿಸಿ ನೆಟ್‌ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ.

ನೀಟ್‌ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹಾ ನಿರ್ದೇಶಕ ಸುಬೋಧ್‌ ಕುಮಾರ್‌ ಸಿಂಗ್‌ ಅವರನ್ನು ಕೇಂದ್ರ ಸರ್ಕಾರವು ಹುದ್ದೆಯಿಂದ ಕೆಳಗಿಳಿಸಿದೆ. ಅವರ ಜಾಗಕ್ಕೆ ಪ್ರದೀಪ್‌ ಸಿಂಗ್‌ ಖರೋಲಾ ಅವರನ್ನು ನೇಮಿಸಿದೆ. ಶನಿವಾರ (ಜೂನ್‌ 22) ಸಿಬಿಐ ತನಿಖೆಗೆ ವಹಿಸಿದ ಕೇಂದ್ರ ಸರ್ಕಾರವು, “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿತ್ತು.

ಇದನ್ನೂ ಓದಿ: NEET UG: ನೀಟ್‌ ಅಕ್ರಮ; ಎಫ್‌ಐಆರ್‌ ದಾಖಲಿಸಿದ ಸಿಬಿಐ, ತನಿಖೆ ಮತ್ತಷ್ಟು ಚುರುಕು

Exit mobile version