ಚಂಡೀಗಢ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ʼಬುಲ್ಡೋಜರ್ ನ್ಯಾಯʼ (Bulldozer Justice) ಪದ್ಧತಿಯನ್ನು ಮಧ್ಯಪ್ರದೇಶದ ಬಳಿಕ ಹರಿಯಾಣವೂ ಅಳವಡಿಸಿಕೊಂಡಿದೆ. ಹರಿಯಾಣದ ನುಹ್ ಜಿಲ್ಲೆಯಲ್ಲಿ (Nuh Violence) ಹಿಂಸಾಚಾರಕ್ಕೆ ಕಾರಣರಾದವರ ಮನೆ, ಅಂಗಡಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಶನಿವಾರವೂ (August 5) ಮುಂದುವರಿದಿದ್ದು, 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೇ ನುಹ್ ನಗರದ ನಲ್ಹಾರ್ ರಸ್ತೆ ಬಳಿಯ ಎಸ್‌ಕೆಎಚ್‌ಎಂ ಸರ್ಕಾರಿ ಮೆಡಿಕಲ್ ಕಾಲೇಜ್ ಸುತ್ತಮುತ್ತಲಿನ 24ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಸೇರಿ 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. “ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನುಹ್ ಜಿಲ್ಲಯ ತೌರ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ಇವರು ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ” ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಬುಲ್ಡೋಜರ್‌ಗಳ ಅಬ್ಬರ
“ನುಹ್ ಜಿಲ್ಲೆಯಲಲಿ ಸುಮಾರು 2.5 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದಾರೆ. ಹೀಗೆ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿದವರು ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಾಗಿ, ಶನಿವಾರ ಬೆಳಗ್ಗೆ 45 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಹರಿಯಾಣ ಕೋಮುಗಲಭೆ ಹಿಂದಿನ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕು
ಶುಕ್ರವಾರ (August 4) ನುಹ್ ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಿದ 250 ಗುಡಿಸಲುಗಳು ಹಾಗೂ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಜುಲೈ 31ರಂದು ಮುಸ್ಲಿಮರ ಸಂಖ್ಯೆ ಜಾಸ್ತಿ ಇರುವ ನುಹ್‌ನಲ್ಲಿ ವಿಶ್ವ ಹಿಂದು ಪರಿಷತ್ (VHP) ಸಾಗುತ್ತಿದ್ದ ಮೆರವಣಿಗೆ ಮೇಲೆ ಗುಂಪೊಂದು ದಾಳಿ ನಡೆಸಿದ ಬಳಿಕ ಕೋಮುಗಲಭೆ ಉಂಟಾಗಿದೆ. ನುಹ್‌ನಲ್ಲಿ ನಡೆದ ಗಲಭೆಯಲ್ಲಿ ಇಬ್ಬರು ಹೋಮ್‌ಗಾರ್ಡ್‌ಗಳು, ಒಬ್ಬ ಮೌಲ್ವಿ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಗಲಭೆಯು ಗುರುಗ್ರಾಮದ ಸುತ್ತಮುತ್ತ ವ್ಯಾಪಿಸಿದ್ದು ಆತಂಕಕ್ಕೀಡು ಮಾಡಿತ್ತು.