Site icon Vistara News

Nuh Violence: ಹರಿಯಾಣದ ನುಹ್‌ನಲ್ಲಿ ಹಿಂಸಾಚಾರದ ಸಾವಿನ ಸಂಖ್ಯೆ 5ಕ್ಕೆ ಏರಿಕೆ

nuh violence

ಹೊಸದಿಲ್ಲಿ: ಹರಿಯಾಣದ ನುಹ್‌ನಲ್ಲಿ (Nuh Violence) ಮಂಗಳವಾರ ಬೆಳಿಗ್ಗೆ ನಡೆದ ಕೋಮುಗಲಭೆಯಲ್ಲಿ (communal Violence) ಸಾವಿನ ಸಂಖ್ಯೆ ಐದಕ್ಕೆ ತಲುಪಿದೆ. ಸೋಮವಾರ ಸಂಜೆ ಧಾರ್ಮಿಕ ಮೆರವಣಿಗೆಯ ವೇಳೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಹಚ್ಚಿತ್ತು. ಗಲಭೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ನಾಲ್ಕು ಸಾವುಗಳು ನುಹ್‌ನಿಂದ ವರದಿಯಾಗಿವೆ. ಇದರಲ್ಲಿ ಇಬ್ಬರು ಗೃಹ ರಕ್ಷಕ ದಳದವರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ. ಗುರುಗ್ರಾಮದಿಂದಲೂ ಒಂದು ಸಾವು ವರದಿಯಾಗಿದೆ. ಇಲ್ಲಿ ಮಸೀದಿಯೊಂದಕ್ಕೆ ಗುಂಡು ಹಾರಿಸಿ ನಂತರ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಶಾಂತಿ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬೆಟಾಲಿಯನ್‌ಗಳು ಇಲ್ಲಿ ಬೀಡುಬಿಟ್ಟಿವೆ. ಹರಿಯಾಣ ಸರ್ಕಾರವು ಗುರುಗ್ರಾಮ್, ಫರಿದಾಬಾದ್ ಮತ್ತು ಪಲ್ವಾಲ್‌ನಲ್ಲಿ ಮಂಗಳವಾರ ಶಾಲೆಗಳನ್ನು ಮುಚ್ಚಿದೆ.

ಪೊಲೀಸರ ಪ್ರಕಾರ, ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಗಾರ್ಗಿ ಕಕ್ಕರ್ ಅವರು ಗುರುಗ್ರಾಮದ ಸಿವಿಲ್ ಲೈನ್ಸ್‌ನಿಂದ ಆರಂಭಿಸಿದ್ದ ‘ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ’ಯನ್ನು ನುಹ್‌ನ ಖೇಡ್ಲಾ ಮೋಡ್ ಬಳಿ ಕಿಡಿಗೇಡಗಳ ಗುಂಪೊಂದು ತಡೆದಿತ್ತು. ಕಲ್ಲು ತೂರಾಟ ನಡೆಸಿತ್ತು. ಸೋಮವಾರ ಸಂಜೆಯ ಹೊತ್ತಿಗೆ ಹಿಂಸಾಚಾರವು ಗುರುಗ್ರಾಮ್ ಜಿಲ್ಲೆಯ ಸೋಹ್ನಾ ಸೇರಿದಂತೆ ಹರಿಯಾಣದ ಇತರ ಭಾಗಗಳಿಗೆ ಹರಡಲು ಪ್ರಾರಂಭಿಸಿತು.

ನುಹ್‌, ಗುರುಗ್ರಾಮ್ ಮತ್ತು ರೆವಾರಿ ಜಿಲ್ಲೆಗಳು ಸೇರಿದಂತೆ ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಪ್ರದೇಶದಲ್ಲಿ ಆಗಸ್ಟ್ 2ರವರೆಗೆ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಸ್ಥಳೀಯರ ಪ್ರಕಾರ, ಹಲವಾರು ಅಂಗಡಿಗಳು ಮತ್ತು ಕಾರುಗಳನ್ನು ಸುಟ್ಟುಹಾಕಲಾಗಿದೆ ಅಥವಾ ಧ್ವಂಸಗೊಳಿಸಲಾಗಿದೆ. ಸೊಹ್ನಾದ ಸೊಹ್ನಾ ಚೌಕ್ ಬಳಿ ಸುಮಾರು 50 ಕಾರುಗಳಿಗೆ ಹಾನಿಯಾಗಿದೆ. ಅನೇಕ ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ನುಹ್‌ನಿಂದ ಇದೇ ದೃಶ್ಯಗಳು ವರದಿಯಾಗಿವೆ.

ಸೋಮವಾರ ತಡರಾತ್ರಿ ಗುರುಗ್ರಾಮ್‌ನ ಸೆಕ್ಟರ್ 57ರ ಮಸೀದಿಯೊಂದಕ್ಕೆ ದಾಳಿ ಮಾಡಿದ ಸುಮಾರು 45 ಜನರ ಗುಂಪೊಂದು ಗುಂಡು ಹಾರಿಸಿದ್ದು, ನಂತರ ಅದನ್ನು ಸುಟ್ಟು ಹಾಕಿದೆ. ಇಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: Haryana Violence: ಹರ್ಯಾಣದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಇಬ್ಬರು ಹೋಮ್‌ಗಾರ್ಡ್ಸ್ ಸಾವು, 7 ಪೊಲೀಸರಿಗೆ ಗಾಯ

Exit mobile version