Site icon Vistara News

Nuh Violence: ವಿಎಚ್‌ಪಿ, ಬಜರಂಗದಳ ರ‍್ಯಾಲಿಗೆ ತಡೆಯಾಜ್ಞೆ ಇಲ್ಲ; ಭದ್ರತೆ ಒದಗಿಸಲು ಸುಪ್ರೀಂ ಸೂಚನೆ

Supreme Court On Nuh Violence

Nuh Violence: Supreme Court Does Not Stay On VHP Rallies In Delhi, Hearing On August 4

ನವದೆಹಲಿ: ಹರಿಯಾಣದ ಗುರುಗ್ರಾಮ ಬಳಿಕ ನುಹ್‌ ಪ್ರದೇಶದಲ್ಲಿ (Nuh Violence) ನಡೆದ ಗಲಭೆಯ ಬಳಿಕ ವಿಶ್ವ ಹಿಂದು ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನಾ ರ‍್ಯಾಲಿಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮುಸ್ಲಿಮರು ಮಾಡಿದ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಇದರಿಂದಾಗಿ, ವಿಎಚ್‌ಪಿ ಹಾಗೂ ಬಜರಂಗದಳ ಸಂಘಟನೆಗಳು ಪ್ರತಿಭಟನೆ ನಡೆಸಬಹುದಾಗಿದೆ. ಆದರೆ, ಗಲಭೆ, ದ್ವೇಷಭಾಷಣ ಮಾಡಬಾರದು ಎಂದು ಖಡಕ್‌ ಸೂಚನೆ ನೀಡಿದೆ.

ರ‍್ಯಾಲಿಗಳಿಗೆ ತಡೆಯಾಜ್ಞೆ ನೀಡಬೇಕು ಎಂಬುದು ಸೇರಿ ಮುಸ್ಲಿಮರ ಪರ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ರ‍್ಯಾಲಿಗಳಿಗೆ ಅನುಮತಿ ನೀಡಿದೆ. ಆದರೆ, ಅರ್ಜಿಯನ್ನು ಶುಕ್ರವಾರ (ಆಗಸ್ಟ್‌ 4) ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಆದರೆ, ವಿಎಚ್‌ಪಿ, ಬಜರಂಗದಳ ರ‍್ಯಾಲಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

“ದೆಹಲಿಯಲ್ಲಿ ವಿಎಚ್‌ಪಿ ಹಾಗೂ ಬಜರಂಗದಳ ನಡೆಸುತ್ತಿರುವ ರ‍್ಯಾಲಿಗಳಿಗೆ ಬಿಗಿ ಬಂದೋಬಸ್ತ್‌ ವಹಿಸಬೇಕು. ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು. ರ‍್ಯಾಲಿ ನಡೆಯುವ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ದ್ವೇಷ ಭಾಷಣ, ಗಲಭೆ, ಹಿಂಸೆಗೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಭದ್ರತೆ ಒದಗಿಸಬೇಕು” ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಇದನ್ನೂ ಓದಿ: Nuh Violence: ಹರಿಯಾಣದ ನುಹ್‌ನಲ್ಲಿ ಹಿಂಸಾಚಾರದ ಸಾವಿನ ಸಂಖ್ಯೆ 5ಕ್ಕೆ ಏರಿಕೆ

ರ‍್ಯಾಲಿಯಲ್ಲೇ ಭಾಗವಹಿಸಿಲ್ಲ ಎಂದ ಮೋನು

ನುಹ್‌ ಪ್ರದೇಶದಲ್ಲಿ ರ‍್ಯಾಲಿ ಕೈಗೊಳ್ಳುವಾಗ ಹಿಂಸಾಚಾರ ಭುಗಿಲೇಳಲು ಬಜರಂಗದಳ ನಾಯಕ ಮೋನು ಮನೇಸರ್‌ ಅವರೇ ಕಾರಣ ಎಂದು ತಿಳಿದುಬಂದಿರುವ ಬೆನ್ನಲ್ಲೇ ಈ ಕುರಿತು ಮೋನು ಮನೇಸರ್‌ ಸ್ಪಷ್ಟನೆ ನೀಡಿದ್ದಾರೆ. “ನಾನು ಯಾವುದೇ ಪ್ರಚೋದನಾತ್ಮಕ ಹೇಳಿಕೆ ನೀಡಿಲ್ಲ. ಅಷ್ಟಕ್ಕೂ ನಾನು ರ‍್ಯಾಲಿಯಲ್ಲಿಯೇ ಭಾಗವಹಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳ ಕುರಿತು ಮೋನು ಮನೇಸರ್‌ ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಾರಣ ಹಿಂಸಾಚಾರ ನಡೆದಿದೆ ಎಂದು ತಿಳಿದುಬಂದಿದೆ. ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

Exit mobile version