ಮುಂಬೈ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಪ್ರವಾದಿ ಮೊಹಮ್ಮದ್‌ರನ್ನು ಅವಹೇಳನ ಮಾಡುವ ಮೂಲಕ ಸ್ವತಃ ಅಪಾಯದಲ್ಲಿ ಸಿಲುಕುವ ಜತೆ ಇಡೀ ದೇಶದ ಭದ್ರತಾ ವ್ಯವಸ್ಥೆಯನ್ನು ಅಪಾಯದಲ್ಲಿಟ್ಟಿದ್ದರು. ದೇಶದೊಳಗಿನ ಮುಸ್ಲಿಮರಷ್ಟೇ ಅಲ್ಲ, ವಿಶ್ವದ ಅನೇಕ ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ತಿರುಗಿಬಿದ್ದಿದ್ದವು. ಇಷ್ಟೆಲ್ಲದ ಮಧ್ಯೆ ನೂಪುರ್ ಶರ್ಮಾ ವಿರುದ್ಧ ಮಹಾರಾಷ್ಟ್ರದ ಮೂಲಭೂತವಾದಿ ಮುಸ್ಲಿಮರ ಗುಂಪಾದ ರಾಝಾ ಅಕಾಡೆಮಿ ಪೈದೋನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಮುಂಬೈ ಪೊಲೀಸರು ನೂಪುರ್‌ಗೆ ಸಮನ್ಸ್ ನೀಡಿ, ಜೂ.25ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಈಗ ನೂಪುರ್ ಶರ್ಮಾ ಪತ್ತೆಯೇ ಇಲ್ಲ ಎನ್ನಲಾಗಿದೆ.
ನೂಪುರ್ ಶರ್ಮಾರನ್ನು ಬಂಧಿಸಲು ಪೊಲೀಸರ ಬಳಿ ಸಾಕಷ್ಟು ಪುರಾವೆಯಿದೆ ಎಂದು ಮಹಾರಾಷ್ಟ್ರ ಗೃಹ ಇಲಾಖೆಯೇ ಹೇಳಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳಿಂದ ಮುಂಬೈ ಪೊಲೀಸರ ತಂಡವೊಂದು ದೆಹಲಿಯಲ್ಲಿ ಬೀಡುಬಿಟ್ಟು, ನೂಪುರ್ ಶರ್ಮಾರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದೂ ಹೇಳಲಾಗಿದೆ. ನೂಪುರ್ ಶರ್ಮಾ ವಿರುದ್ಧ ಕೇವಲ ಪೈದೋನಿ ಠಾಣೆಯಲ್ಲಷ್ಟೇ ಅಲ್ಲದೆ, ಥಾಣೆಯಲ್ಲೂ ಎಫ್‌ಐಆರ್ ರಿಜಿಸ್ಟರ್ ಆಗಿದೆ.
ಇನ್ನು ನೂಪುರ್ ಶರ್ಮಾಗೂ ಕೂಡ ಜೀವ ಬೆದರಿಕೆ ಇದೆ. ಪ್ರವಾದಿ ವಿರುದ್ಧ ನೀಡಿದ ಹೇಳಿಕೆಯಿಂದ ಕೆರಳಿರುವ ಮುಸ್ಲಿಂ ಸಮುದಾಯದವರು ಅನೇಕರು ಆಕೆಗೆ ಪ್ರಾಣ ತೆಗೆಯುವ ಮತ್ತು ಅತ್ಯಾಚಾರ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನೂಪುರ್ ಶರ್ಮಾ ದೆಹಲಿ ಪೊಲೀಸರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಅವರಿಗೆ ಬಿಗಿ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಮೂವರ ಬಂಧನ