ನವ ದೆಹಲಿ: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮುಂದುವರಿಸಲಿದೆ.
ಪ್ರವಾದಿ ವಿರುದ್ಧದ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಎಎಫ್‌ಆರ್‌ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸದಂತೆ ತಡೆಯಾಜ್ಞೆ ನೀಡಬೇಕು ಕೋರಿ ನೂಪುರ್ ಶರ್ಮಾ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನು ಒಳಗೊಂಡಿರುವ ಪೀಠವು ವಿಚಾರಣೆಯನ್ನು ಮುಂದುವರಿಸಲಿದೆ. ದೇಶದ ನಾನಾ ಕಡೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಆರ್‌ಗಳನ್ನು ಸಂಯೋಜಿಸಬೇಕು ಎಂದೂ ನೂಪುರ್ ಶರ್ಮಾ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಹೊಸತಾಗಿ ಜೀವ ಬೆದರಿಕೆಗಳು ಎದುರಾಗಿದ್ದು, ಬಂಧಿಸದಂತೆ ತಡೆಯಾಜ್ಞೆ ನೀಡಬೇಕು. ಜತೆಗೆ ಎಲ್ಲ ಎಫ್‌ಐಆರ್‌ಗಳನ್ನು ಒಟ್ಟಿಗೆ ಸಂಯೋಜಿಸಬೇಕು ಎಂದು ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಎಲ್ಲ ಎಫ್‌ಐಆರ್‌ಗಳನ್ನೂ ಸಂಯೋಜಿಸಲು ಕಳೆದ ಸಲದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಆಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ನೂಪುರ್ ಶರ್ಮಾ ಪಾಲ್ಗೊಂಡ ಡಿಬೇಟ್‌ನ್ನು ನಾವು ವೀಕ್ಷಿಸಿದ್ದೇವೆ. ಅದರಲ್ಲಿ ನೂಪುರ್ ಶರ್ಮಾರನ್ನು ಹೇಗೆ ಪ್ರಚೋದಿಸಲಾಯಿತು ಎಂಬುದನ್ನೂ ನೋಡಿದ್ದೇವೆ. ಆದರೆ ನಂತರ ಅವಳಾಡಿದ ಮಾತು, ಕೊನೆಯಲ್ಲಿ ನಾನೊಬ್ಬ ವಕೀಲೆ ಎಂದು ಹೇಳಿಕೊಂಡಿದ್ದೆಲ್ಲ ನಾಚಿಕೆಗೇಡು. ಆಕೆಯ ಹೇಳಿಕೆಯಿಂದ ಇಡೀ ದೇಶದಲ್ಲಿ ಕಿಡಿ ಹೊತ್ತಿಕೊಂಡಿತು. ಏನೆಲ್ಲ ಪ್ರತಿಭಟನೆ, ಹಿಂಸಾಚಾರ, ನಷ್ಟವಾಯಿತೋ ಅದೆಲ್ಲದಕ್ಕೂ ನೂಪುರ್ ಶರ್ಮಾ ಒಬ್ಬರೇ ಸಂಪೂರ್ಣ ಹೊಣೆ ಹೊರತು ಇನ್ಯಾರೂ ಅಲ್ಲ. ತಕ್ಷಣವೇ ಅವರು ದೇಶದ ಕ್ಷಮೆ ಕೋರಲಿʼʼ ಎಂದು ಹೇಳಿದ್ದರು.