Site icon Vistara News

Bigg Boss: ಬಿಗ್‌ ಬಾಸ್‌ ಶೋಗೆ ಶೀಘ್ರವೇ ಸೆನ್ಸಾರ್‌ ಕಣ್ಗಾವಲು? ಕೇಂದ್ರ, ರಾಜ್ಯ, ಚಾನೆಲ್‌ಗಳಿಗೆ ಕೋರ್ಟ್‌ ನೋಟಿಸ್

Bigg Boss

Obscenity in TV shows bad for society: High Court Issues Notice To Governments

ಹೈದರಾಬಾದ್:‌ ಟಿ.ವಿ ಶೋಗಳಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಅಶ್ಲೀಲ ದೃಶ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಆಂಧ್ರಪ್ರದೇಶ ಸರ್ಕಾರ, ಸ್ಟಾರ್‌ ಮಾ ಟಿವಿ, ನಟ ನಾಗಾರ್ಜುನ (ಬಿಗ್‌ ಬಾಸ್‌ ತೆಲುಗು ಶೋ ನಿರೂಪಕ) ಹಾಗೂ ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲಂ ಸರ್ಟಿಫಿಕೇಶನ್‌ (CBFC)ಗೆ ನೋಟಿಸ್‌ (Bigg Boss) ನೀಡಿದೆ. ಹಾಗೆಯೇ, ಟಿವಿ ಶೋಗಳಲ್ಲಿ ಅಶ್ಲೀಲ ದೃಶ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದೆ.

ಬಿಗ್‌ ಬಾಸ್‌ ಶೋನಲ್ಲಿ ಅಶ್ಲೀಲ, ಅಸಭ್ಯ ದೃಶ್ಯಗಳು ಪ್ರಸಾರವಾಗುತ್ತಿವೆ. ಇವುಗಳನ್ನು ಕಡಿವಾಣ ಹಾಕಬೇಕು ಎಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು. ದುರ್ಗಾ ಪ್ರಸಾದ್‌ ರಾವ್‌ ಹಾಗೂ ಪಿ. ವೆಂಕಟ ಜ್ಯೋತಿರ್ಮಯಿ ಅವರಿದ್ದ ಪೀಠವು, “ಟಿವಿ ಶೋಗಳಲ್ಲಿ ಅಶ್ಲೀಲ ದೃಶ್ಯಗಳ ಪ್ರಸಾರವು ಸಮಾಜಕ್ಕೆ ಅಪಾಯಕಾರಿಯಾಗಿವೆ. ಹಾಗಾಗಿ, ಇಂತಹ ದೃಶ್ಯಗಳಿಗೆ ಕಡಿವಾಣ ಹಾಕುವ ಹಾಗೂ ಸೆನ್ಸಾರ್‌ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು” ಎಂದು ನಿರ್ದೇಶಿಸಿದೆ.

ತೆಲುಗು ಸಿನಿಮಾ ನಿರ್ಮಾಪಕ, ತೆಲುಗು ಯುವಶಕ್ತಿ ಅಧ್ಯಕ್ಷ ಕೆತಿರೆಡ್ಡಿ ಜಗದೀಶ್ವರ್‌ ರೆಡ್ಡಿ ಅವರು ನ್ಯಾಯಾಲಯಕ್ಕೆ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. “ಯಾವುದೇ ಸೆನ್ಸಾರ್‌ ಇಲ್ಲದೆ ಬಿಗ್‌ ಬಾಸ್‌ ಶೋ ಪ್ರಸಾರವಾಗುತ್ತದೆ. ಇದರಲ್ಲಿ ಹಲವು ಅಶ್ಲೀಲ ದೃಶ್ಯಗಳು ಇರುತ್ತವೆ. ಅದರಿಂದಾಗಿ ಮಕ್ಕಳು ಶೋ ನೋಡಲು ಆಗುವುದಿಲ್ಲ. ಅಸಭ್ಯ ವರ್ತನೆಗಳು ಕೂಡ ಪ್ರಸಾರವಾಗುತ್ತವೆ. ಹಾಗಾಗಿ, ಶೋ ಪ್ರಸಾರವನ್ನು ರಾತ್ರಿ 11ರಿಂದ ಬೆಳಗ್ಗೆ 5 ಗಂಟೆ ಅವಧಿಯಲ್ಲಿ ಮಾತ್ರ ಪ್ರಸಾರ ಮಾಡಬೇಕು” ಎಂದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Digital Honey Trap: ಸಂಸದ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್‌ಮೇಲ್‌ಗೆ ಯತ್ನ!

ಕನ್ನಡ, ಹಿಂದಿ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಬಿಗ್‌ ಬಾಸ್‌ ರಿಯಾಲಿಟಿ ಶೋ ಪ್ರಸಾರವಾಗುತ್ತದೆ. ಕೆಲ ದಿನಗಳ ಹಿಂದೆ ಹಿಂದಿಯ ಬಿಗ್ ಬಾಸ್ ಒಟಿಟಿ ಶೋನಲ್ಲಿ ನಡೆಸಲಾದ ಟಾಸ್ಕ್ ವೇಳೆ ಸ್ಪರ್ಧಿಗಳಿಬ್ಬರು ಪರಸ್ಪರ ಬರೋಬ್ಬರಿ 30 ಸೆಕೆಂಡ್ ಕಾಲ ಕಿಸ್ ಮಾಡಿದ ವಿಡಿಯೊ ಸಖತ್ ವೈರಲ್ ಆಗಿತ್ತು. ಬಿಗ್ ಬಾಸ್ ಒಟಿಟಿ 2 ಸೀಸನ್‌ನಲ್ಲಿ ಸ್ಪರ್ಧಿಗಳಾಗಿರುವ ಆಕಾಂಕ್ಷಾ ಪುರಿ ಮತ್ತು ಜಡ್ ಹದಿದ್ ಅವರು ಟಾಸ್ಕ್ ವೇಳೆ ಪರಸ್ಪರ ಕಿಸ್ಸಿಂಗ್ ಮಾಡಿದ್ದರು. ಚುಂಬನದ ಬಳಿಕ, ಇಬ್ಬರೂ ಸ್ಪರ್ಧಿಗಳು ಏನಾಯಿತು ಎಂಬುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಇದರ ಕುರಿತು ಆಕ್ಷೇಪ ವ್ಯಕ್ತವಾಗಿದ್ದವು.

Exit mobile version