ಭುವನೇಶ್ವರ: ಅಸಿಸ್ಟಂಟ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಚಂದ್ರ ದಾಸ್ ಎಂಬುವರಿಂದ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ ಒಡಿಶಾ ಆರೋಗ್ಯ ಸಚಿವ (Odisha Health Minister Dies) ನಬಾ ಕಿಶೋರ್ ದಾಸ್ (Naba Kishore Das) ನಿಧನರಾಗಿದ್ದಾರೆ. ಜಾರ್ಸುಗುಡ ಜಿಲ್ಲೆಯಲ್ಲಿ ಎಎಸ್‌ಐ ಅವರಿಂದ ಗುಂಡೇಟು ತಿಂದಿದ್ದ 61 ವರ್ಷದ ಸಚಿವರನ್ನು ಭುವನೇಶ್ವರಕ್ಕೆ ಏರ್‌ಲಿಫ್ಟ್ ಮಾಡಿ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಜಾರ್ಸುಗುಡ ಜಿಲ್ಲೆಯ ಗಾಂಧಿ ಚೌಕ್ ಬಳಿಯಿರುವ ಬ್ರಜರಾಜನಗರದಲ್ಲಿ ನೂತನವಾಗಿ ನಿರ್ಮಾಣವಾದ ಬಿಜು ಜನತಾ ದಳ ಪಕ್ಷದ ಕಚೇರಿ ಉದ್ಘಾಟನೆಗಾಗಿ ಸಚಿವ ನಬಾ ಕಿಶೋರ್ ದಾಸ್ ತೆರಳಿದ್ದರು. ಅವರು ಗಾಂಧಿ ಚೌಕದ ಬಳಿ ಕಾರಿನಿಂದ ಇಳಿಯುತ್ತಿದ್ದಂತೆ, ಅಲ್ಲಿಯೇ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಗೋಪಾಲ್ ಚಂದ್ರ ದಾಸ್ ತಮ್ಮ ಸರ್ವೀಸ್ ರಿವಾಲ್ವರ್ನಿಂದ ಫೈರಿಂಗ್ ಮಾಡಿದ್ದರು. ಒಟ್ಟು ನಾಲ್ಕು ಗುಂಡುಗಳನ್ನು ಹಾರಿಸಿದ್ದು, ಅದರಲ್ಲಿ ಎರಡು ಗುಂಡುಗಳು ಸಚಿವರ ಎದೆಗೇ ನಾಟಿದ್ದವು.
ಆರೋಗ್ಯ ಸಚಿವರ ನಿಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀಣ್ ಪಾಟ್ನಾಯಕ್ ಸಂತಾಪ ಸೂಚಿಸಿದ್ದಾರೆ. ಕೃತ್ಯ ಎಸಗಿದ ಸಹಾಯಕ ಇನ್ಸ್‌ಪೆಕ್ಟರ್ ಗೋಪಾಲ್ ದಾಸ್ ಬಂಧನವಾಗಿದ್ದು, ಇದುವರೆಗೂ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದಾಗ್ಯೂ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ.
ಎಎಸ್‌ಐ ಗೋಪಾಲ್ ದಾಸ್ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು, ಅವರಿಗೆ ಅಧಿಕ ರಕ್ತದೊತ್ತಡ ಇದೆ ಎಂದು ತಿಳಿದುಬಂದಿದೆ. ಪೊಲೀಸ್ ಇಲಾಖೆಯ ಸೇವೆಯಲ್ಲಿ ಉತ್ತಮ ಹೆಸರು ಗಳಿಸಿರುವ ಗೋಪಾಲ್ ದಾಸ್, 12 ವರ್ಷದ ಸೇವೆ ಬಳಿಕ ಎಎಸ್‌ಐ ಹುದ್ದೆ ಪಡೆದಿದ್ದರು. ಆದರೆ, ಏಕಾಏಕಿ ಸಚಿವರ ಮೇಲೆ ಗುಂಡು ಹಾರಿಸುವ ಮೂಲಕ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: Naba Kishore Das: ಪೊಲೀಸ್ ಅಧಿಕಾರಿಯಿಂದ ಗುಂಡೇಟು ತಿಂದ ಒಡಿಶಾ ಆರೋಗ್ಯ ಸಚಿವರ ಸ್ಥಿತಿ ಗಂಭೀರ