ಕೋಲ್ಕೊತಾ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು 58ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 81 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಎಂತಹ ದುರ್ವಿಧಿ ನೋಡಿ, ರೈಲು ಅಪಘಾತದಲ್ಲಿ ಗಾಯಗೊಂಡ ಜನರನ್ನು ಸಾಗಿಸುತ್ತಿದ್ದ ಬಸ್ ಕೂಡ ಅಪಘಾತಕ್ಕೀಡಾಗಿದೆ.
ಹೌದು, ಬಾಲಾಸೋರ್ ಜಿಲ್ಲೆಯಲ್ಲಿ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಪಘಾತಕ್ಕೀಡಾಗಿದೆ. ಬಾಲಾಸೋರ್‌ನಿಂದ ತೆರಳಿದ ಬಸ್ ಮೇದಿನಿಪುರದಲ್ಲಿ ಪಿಕಪ್ ವ್ಯಾನ್‌ಗೆ ಡಿಕ್ಕಿಯಾಗಿದ್ದು, ರೈಲು ಅಪಘಾತದಲ್ಲಿ ಗಾಯಗೊಂಡವರಿಗೆ ಮತ್ತಷ್ಟು ಗಾಯಗಳಾಗಿವೆ. ಗಾಯಾಳುಗಳನ್ನು ಪೊಲೀಸರ ನೆರವಿನಿಂದ ಮೇದಿನಿಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದಷ್ಟು ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಏರ್‌ಫೋರ್ಸ್ ಕಾಪ್ಟರ್ ಮೂಲಕ ಒಡಿಶಾದ ಬಾಹನಾಗಾ ಬಜಾರ್ ಸ್ಟೇಷನ್ ಬಳಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಸೀದಾ ಅಪಘಾತ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಜತೆಗೆ, ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಈ ವೇಳೆ, ಪ್ರಧಾನಿ ಮೋದಿ ಅವರಿಗೆ ಸಂಪುಟದ ಸಹೋದ್ಯೋಗಿಗಳಾದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಾಥ್ ನೀಡಿದರು.
ಇದನ್ನೂ ಓದಿ: Odisha Train Accident: ಗ್ರೀನ್ ಸಿಗ್ನಲ್ ಸಿಕ್ಕರೂ ನಡೆಯಿತು ರೈಲು ಅಪಘಾತ, ತನಿಖಾ ವರದಿ ಮಾಹಿತಿಯೇ ಭೀಕರ
ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ ವಿಶ್ವದ ಹಲವು ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ. “ಒಡಿಶಾದಲ್ಲಿ ನಡೆದ ರೈಲು ದುರಂತದ ಸುದ್ದಿ ತಿಳಿದು ಅತೀವ ಬೇಸರವಾಗಿದೆ. ಗಾಯಾಳುಗಳು ಕ್ಷಿಪ್ರವಾಗಿ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಜಪಾನ್ ಪ್ರಧಾನಿ ಫುಮಿಯೋ ಕಿಶಿದ ಅವರು ಕೂಡ ಸಂತಾಪ ಸೂಚಿಸಿದ್ದಾರೆ. “ರೈಲು ಅಪಘಾತದಲ್ಲಿ ನೂರಾರು ಜನ ಮೃತಪಟ್ಟಿದ್ದು ಬೇಸರ ತಂದಿದೆ. ಮೃತರ ಕುಟುಂಬಸ್ಥರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟ್ವೀಟ್ ಮಾಡಿದ್ದಾರೆ.
ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ಕೂಡ ಸಂತಾಪ ಸಂದೇಶ ಕಳುಹಿಸಿದಾರೆ. “ಭಾರತೀಯರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಇಡೀ ಯುರೋಪ್ ನಾಗರಿಕರು ಭಾರತೀಯರ ದುಃಖಕ್ಕೆ ಮರಗುತ್ತದೆ” ಎಂದು ಹೇಳಿದ್ದಾರೆ. ಹಾಗೆಯೇ, ನೇಪಾಳ ಪ್ರಧಾನಿ ಪ್ರಚಂಡ, ಭೂತಾನ್ ಪ್ರಧಾನಿ ಲೊಟೆ ತ್ಸೆರಿಂಗ್, ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಕ್ಸಾಬಾ ಕೊರೊಸಿ, ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಸೇರಿ ಹಲವು ವಿದೇಶಿ ಗಣ್ಯರು ಸಂತಾಪ ಸೂಚಿಸಿದ್ದಾರೆ.