Site icon Vistara News

ಒಡಿಶಾ ರೈಲು ದುರಂತದ ಶವಗಳನ್ನು ಇರಿಸಿದ್ದ ಶಾಲೆಗೆ ಬರಲು ಹೆದರಿದ ಮಕ್ಕಳು; ಕಟ್ಟಡ ನೆಲಸಮ

Bahanaga High School Of Odisha

Odisha Train Accident: Government demolishes high school used as morgue

ಭುವನೇಶ್ವರ: ಅದು ರೈಲು ದುರಂತವೇ ಇರಲಿ, ವಿಮಾನ ಪತನವೇ ಆಗಲಿ, ಹವಾಮಾನ ವೈಪರೀತ್ಯವೇ ಸಂಭವಿಸಲಿ, ದುರಂತದ ಜತೆಗೆ ಅದರ ಅಡ್ಡಪರಿಣಾಮಗಳು ಕೂಡ ಜನರನ್ನು ಬಾಧಿಸುತ್ತವೆ. ದುರಂತದ ಪರಿಣಾಮಗಳು ಅಷ್ಟರಮಟ್ಟಿಗೆ ಭೀಕರವಾಗಿರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಒಡಿಶಾದ ಬಾಲಾಸೋರ್‌ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಜೂನ್‌ 2ರಂದು ಸಂಭವಿಸಿದ ರೈಲು ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಇರಿಸಿದ್ದ ಶಾಲೆಯನ್ನು ನೆಲಸಮಗೊಳಿಸಲಾಗಿದೆ. ದುರಂತದ ವೇಳೆ ಶವಗಳನ್ನು ಇರಿಸಿದ ಕಾರಣ ಮಕ್ಕಳು ಶಾಲೆಗೆ ಆಗಮಿಸಲು ಹೆದರುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಬಹನಗ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದ ಜಾಗದಿಂದ ಕೇವಲ ನೂರು ಮೀಟರ್‌ ದೂರದಲ್ಲಿರುವ ಬಹನಗ ಸರ್ಕಾರಿ ಪ್ರೌಢಶಾಲೆಯಲ್ಲಿಯೇ ನೂರಾರು ಶವಗಳನ್ನು ಇರಿಸಲಾಗಿತ್ತು. ಶಾಲೆಯನ್ನು ಶವಾಗಾರದ ರೀತಿ ಮಾಡಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ವಾಪಸ್‌ ಬರಲು ಹೆದರುತ್ತಿದ್ದಾರೆ. ತುಂಬ ವಿದ್ಯಾರ್ಥಿಗಳು ಶಾಲೆಗೇ ಬರುತ್ತಿಲ್ಲ. ಅದರಲ್ಲೂ, ಶಾಲೆಯನ್ನು 1958ರಲ್ಲಿ ನಿರ್ಮಿಸಿದ್ದು, ತುಂಬ ಹಳೆಯದಾದ ಕಾರಣ ನೆಲಸಮಗೊಳಿಸಲಾಗಿದೆ. ಹೊಸ ಶಾಲೆ ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮಕ್ಕಳು ಶಾಲೆಗೆ ಆಗಮಿಸದಿರುವ ಕುರಿತು ಶಾಲೆ ನಿರ್ವಹಣಾ ಸಮಿತಿ ಸದಸ್ಯ ರಾಜಾರಾಮ್‌ ಮಹಾಪಾತ್ರ ಅವರು ಮಾಹಿತಿ ನೀಡಿದ್ದಾರೆ. “ಶಾಲೆಯ ಕೊಠಡಿಗಳಲ್ಲಿ ಇರಿಸಿದ್ದ ಶವಗಳನ್ನು ಸಾಗಿಸಿದ ಬಳಿಕ ಎಲ್ಲ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಆದರೂ, ಮಕ್ಕಳು ಶಾಲೆಗೆ ಬರುತ್ತಿಲ್ಲ. ಅವರಿಗೆ ಹೆದರಿಕೆಯಾಗುತ್ತಿದೆ. ಹಾಗಾಗಿ, ಹಳೆಯ ಶಾಲೆಯನ್ನು ಕೆಡವಲಾಗಿದೆ. ನೂತನ ಕಟ್ಟಡ ನಿರ್ಮಿಸಿ, ಮತ್ತೆ ಮಕ್ಕಳು ಶಾಲೆಗೆ ಬರುವಂತೆ ಮಾಡಲಾಗುತ್ತದೆ” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು

ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ ಹಾಗೂ ಇದು ಹಳೆಯ ಕಟ್ಟಡವೂ ಆಗಿದೆ. ಹಾಗಾಗಿ, ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಶಾಲೆಯ ಆಡಳಿತ ಮಂಡಳಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ, ಶಾಲೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌, ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಶಾಲೆಯ ನಿರ್ಮಾಣಕ್ಕೆ ಅನುಮತಿ ನೀಡಿದರು.

ನೂತನ ಶಾಲೆಯನ್ನು ಸಮರ್ಪಕವಾಗಿ, ಡಿಜಿಟಲ್‌ ಕ್ಲಾಸ್‌ರೂಮ್‌, ಅತ್ಯಾಧುನಿಕ ಸೌಕರ್ಯಗಳು ಇರುವ ರೀತಿ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಜೂನ್‌ 2ರಂದು ಸಂಭವಿಸಿದ ರೈಲು ಅಪಘಾತದಲ್ಲಿ 288 ಜನ ಮೃತಪಟ್ಟರೆ, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು 600ಕ್ಕೂ ಅಧಿಕ ಸಂತ್ರಸ್ತರಿಗೆ ಪರಿಹಾರವನ್ನೂ ವಿತರಣೆ ಮಾಡಿದೆ.

Exit mobile version