ಭುವನೇಶ್ವರ: ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ (Odisha Train Accident) ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಗಾಯಾಳುಗಳ ಸಂಖ್ಯೆಯೂ ಸಾವಿರ ಸಮೀಪಿಸಿದೆ. ಇದರ ಬೆನ್ನಲ್ಲೇ ರೈಲು ಅಪಘಾತದ ಕುರಿತು ಪ್ರಾಥಮಿಕ ತನಿಖೆಯ ಮಾಹಿತಿ ಲಭ್ಯವಾಗಿದ್ದು, ಮಾನವ ಪ್ರಮಾದವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಬಾಲಾಸೋರ್ ರೈಲು ನಿಲ್ದಾಣ ದಾಟಿದ ಬಳಿಕ ವೇಗವಾಗಿ ಸಂಚರಿಸುತ್ತಿತ್ತು. ಮುಂದೆ ಗೂಡ್ಸ್ ರೈಲು ನಿಂತಿರುವ ಕುರಿತು ಲೋಕೊ ಪೈಲಟ್‌ಗೆ ಮಾಹಿತಿ ಇರಲಿಲ್ಲ. ಅದರಲ್ಲೂ, ಗ್ರೀನ್ ಸಿಗ್ನಲ್ ಕಾಣಿಸಿದ ಕಾರಣ ರೈಲು ವೇಗವಾಗಿಯೇ ಚಲಿಸುತ್ತಿತ್ತು. ಆದರೆ, ಇದಾದ ಬಳಿಕ ಗೂಡ್ಸ್ ರೈಲಿಗೆ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆಯಿತು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.
“ರೈಲು ಅಷ್ಟೊಂದು ವೇಗವಾಗಿ ಚಲಿಸುತ್ತಿತ್ತು ಎಂದರೆ ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಾಗಿದೆ. ಗ್ರೀನ್ ಸಿಗ್ನಲ್ ನೀಡಿದ ಕಾರಣಕ್ಕಾಗಿಯೇ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಹಾಗಾಗಿ, ಮಾನವ ಪ್ರಮಾದವೇ ಅಪಘಾತಕ್ಕೆ ಕಾರಣವಾಗಿದೆ. ಇದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತದೆ. ಮೇಲ್ನೋಟಕ್ಕೆ ಮಾನವ ಪ್ರಮಾದವೇ ಅಪಘಾತಕ್ಕೆ ಕಾರಣ” ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಅಪಘಾತದ ಬಳಿಕ ರೈಲಿನ 22 ಬೋಗಿಗಳು ಹಳಿ ತಪ್ಪಿವೆ. ಅಪಘಾತದ ತೀವ್ರತೆಗೆ ಎರಡು ಬೋಗಿಗಳ ಜನರಂತೂ ನಜ್ಜುಗುಜ್ಜಾಗಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 260 ದಾಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶುಕ್ರವಾರ ರಾತ್ರಿ ತ್ರಿವಳಿ ರೈಲುಗಳ ಅಪಘಾತ ಸಂಭವಿಸಿದ್ದು, ರಾತ್ರಿಯಿಡೀ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 700 ನುರಿತ ಸಿಬ್ಬಂದಿ, 200ಕ್ಕೂ ಹೆಚ್ಚು ಆಂಬುಲೆನ್ಸ್‌ಗಳ ಮೂಲಕ ಜನರನ್ನು ರಕ್ಷಣೆ ಮಾಡಲಾಗಿದೆ. ಇದರಿಂದಾಗಿಯೇ ಕ್ಷಿಪ್ರವಾಗಿ ಸಾವಿರಕ್ಕೂ ಅಧಿಕ ಜನರನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿದೆ. ಬಾಲಾಸೋರ್ ಆಸ್ಪತ್ರೆಯಲ್ಲಿ 900ಕ್ಕೂ ಅಧಿಕ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.