ಬಾಲಾಸೋರ್, ಒಡಿಶಾ: 275 ಪ್ರಯಾಣಿಕರ ಸಾವಿಗೆ ಕಾರಣವಾದ ರೈಲು ಅಪಘಾತಕ್ಕೆ (Odisha Train Accident) ಕಾರಣ ಏನೆಂದು ಹುಡುಕುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತಿದೆ. ಈ ಮಧ್ಯೆ, ಅಪಘಾತಕ್ಕೀಡಾದ ಗೂಡ್ಸ್ ಹಾಗೂ ಪ್ರಯಾಣಿಕರ ರೈಲು ಚಾಲಕ (loco pilot) ಹಾಗೂ ಸಹಾಯಕ ಚಾಲಕ (assistant) ವಿರುದ್ಧ ಸರ್ಕಾರಿ ರೈಲ್ವೆ ಪೋಲಿಸ್(GRP), ಬಾಲಾಸೋರ್ ಜಿಆರ್‌ಪಿ ಸ್ಟೇಷನ್‌ನಲ್ಲಿ ಎಫ್ಐಆರ್ ದಾಖಲಿಸಿದೆ. ಜತೆಗೆ, ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ಅನ್ನು ಐಪಿಸಿ ಸೆಕ್ಷನ್‌ಗಳು 337/338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು), 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಮತ್ತು 34 (ಸಾಮಾನ್ಯ ಉದ್ದೇಶ), ಮತ್ತು ರೈಲ್ವೆ ಕಾಯಿದೆಯ ಸೆಕ್ಷನ್ 153/154/175 (ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ದಾಖಲಿಸಲಾಗಿದೆ. ರೈಲು ಅಪಘಾತ ಸಂಭವಿಸಿದ ಮಾರನೇ ದಿನ ಅಂದರೆ, ಜೂನ್ 3 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಬಾಲಸೋರ್ ಜಿಆರ್‌ಪಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಪಾಪು ಕುಮಾರ್ ನಾಯಕ್ ಅವರ ದೂರಿನ ಮೇರೆಗೆ ಎಫ್ಐಆರ್ ಹಾಕಲಾಗಿದೆ.
ಏತನ್ಮಧ್ಯೆ, ಗಾಯಗೊಂಡಿರುವ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಗುಣನಿಧಿ ಮೊಹಾಂತಿ ಮತ್ತು ಅವರ ಸಹಾಯಕ ಹಜಾರಿ ಬೆಹೆರಾ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ರೈಲು ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಮೊಹಾಂತಿ ಮತ್ತು ಬೆಹೆರಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್ಡಿಆರ್ಎಫ್ ಯೋಧ!
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲೆಟ್ ಮತ್ತು ಕೋ ಪೈಲಟ್ ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಚೌಧರಿ ತಿಳಿಸಿದ್ದಾರೆ. ಲೂಪ್ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಗಾರ್ಡ್ ಬಿ ಜೆ ರಾವ್ ಕೂಡ ಅವರ ಆರೋಗ್ಯವೂ ಸ್ಥಿರವಾಗಿದ್ದು, ಅವರಿಗೂ ಭುವನೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.