ನವದೆಹಲಿ: ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ (Odisha Train Accident) ಭೀಕರ ರೈಲು ಅಪಘಾತದಲ್ಲಿ ಸುಮಾರು 288 ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಹಳಿ ಜೋಡಣೆ ಸೇರಿ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ, ಪ್ರಕರಣದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ.
“ಬಾಲಾಸೋರ್ ರೈಲು ಅಪಘಾತದ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. “ಅಪಘಾತದ ಕುರಿತು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಇದುವರೆಗೆ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈಗ ನಂತರದ ತನಿಖೆಯನ್ನು ಸಿಬಿಐ ಮಾಡಲಿದೆ” ಎಂದು ಅಶ್ವಿನಿ ವೈಷ್ಣವ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಶ್ವಿನಿ ವೈಷ್ಣವ್ ಮಾಹಿತಿ
#WATCH | Railway Board recommends CBI probe related to #OdishaTrainAccident, announces Railways minister Vaishnaw pic.twitter.com/X9qUs55fZr
— ANI (@ANI) June 4, 2023
ಇದನ್ನೂ ಓದಿ: Odisha Train Accident : ಒಡಿಶಾ ರೈಲು ದುರಂತ ಸಂತ್ರಸ್ತರಿಗೆ ಕ್ಲೇಮ್ ಸೆಟ್ಲ್‌ಮೆಂಟ್ ಸರಳಗೊಳಿಸಿದ ಎಲ್‌ಐಸಿ
ಇದುವರೆಗಿನ ಮಾಹಿತಿ ಪ್ರಕಾರ, ಇಂಟರ್‌ಲಿಂಕಿಂಗ್ ಸಮಸ್ಯೆ ಹಾಗೂ ಸಿಗ್ನಲಿಂಗ್‌ನಲ್ಲಿ ತೊಂದರೆಯಾದ ಕಾರಣ ರೈಲು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. “ಗ್ರೀನ್ ಸಿಗ್ನಲ್ ಜತೆಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುಮತಿ ನೀಡಲಾಗಿತ್ತು. ಅದರಂತೆ, ಗಂಟೆಗೆ 128 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಆದರೆ, ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾದ ಕಾರಣ ಭೀಕರವಾಗಿ ಅಪಘಾತ ಸಂಭವಿಸಿತು. ಮೂರು ರೈಲುಗಳ ಮಧ್ಯೆ ಅಪಘಾತವಾಗಲು ಗೊಂದಲ ಕಾರಣವಾಗಿದೆ. ಆದರೆ, ಸಿಗ್ನಲಿಂಗ್ ವಿಷಯದ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ಮುಗಿದ ಬಳಿಕವೇ ಎಲ್ಲ ಮಾಹಿತಿ ಲಭ್ಯವಾಗಲಿದೆ” ಎಂದು ರೈಲ್ವೆ ಮಂಡಳಿ ತಿಳಿಸಿದೆ. ಈಗ ಇದರ ಬೆನ್ನಲ್ಲೇ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.
ರೈಲು ಅಪಘಾತ ನಡೆದ ಬಹನಗ ರೈಲು ನಿಲ್ದಾಣದ ಬಳಿ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. ಈಗಾಗಲೇ ಸಿಬ್ಬಂದಿಯು ಹಳಿ ಜೋಡಣೆ ಸೇರಿ ಹಲವು ರೀತಿಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರೈಲು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಹಾಗೆಯೇ, ಪ್ರಕರಣದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಹಾಗೆಯೇ, ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಿದ್ದರು.