Site icon Vistara News

Black Paper: ಶ್ವೇತಪತ್ರಕ್ಕೆ ಬದಲಾಗಿ ‘ಕಪ್ಪುಪತ್ರ’ ಹೊರಡಿಸಿದ ಕಾಂಗ್ರೆಸ್;‌ ಏನಿದು?

Congress Leaders

Congress Releases 10 Saal, Anyay Kaal Poster Against Central Government

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಮೊದಲೇ ಬಿಜೆಪಿ ಹಾಗೂ ಕಾಂಗ್ರೆಸ್ (BJP vs Congress) ಮಧ್ಯೆ ಜಟಾಪಟಿ ಶುರುವಾಗಿದೆ. ತೆರಿಗೆ ಹಂಚಿಕೆ ಸೇರಿ ಹಲವು ವಿಷಯಗಳಲ್ಲಿ ವಾದ-ವಿವಾದ ಶುರುವಾಗಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ (White Paper) ಪ್ರತಿಯಾಗಿ ಕಾಂಗ್ರೆಸ್‌ ಕೂಡ ಸಂಸತ್ತಿನಲ್ಲಿ ಕಪ್ಪುಪತ್ರವನ್ನು (Black Paper) ಹೊರಡಿಸುವ ಮೂಲಕ ಆಡಳಿತಾರೂಢ ಪಕ್ಷಕ್ಕೆ ತಿರುಗೇಟು ನೀಡಿದೆ. 10 ವರ್ಷ ಅನ್ಯಾಯ ಕಾಲ (10 Saal, Anyay Kaal) ಎಂಬ ಪೋಸ್ಟರ್‌ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ.

ಯುಪಿಎ 1 ಹಾಗೂ ಯುಪಿಎ 2ನೇ ಅವಧಿಯಲ್ಲಿ ದೇಶದಲ್ಲಾದ ಆರ್ಥಿಕ ನಿರ್ವಹಣೆ ಕೊರತೆ, ತಪ್ಪು ನಿರ್ಧಾರಗಳು, ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಕಾಂಗ್ರೆಸ್‌ ಕೂಡ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಅನ್ಯಾಯ ಕಾಲ ಪೋಸ್ಟರ್‌ ಬಿಡುಗಡೆ

ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ, ʼ 10 ವರ್ಷ ಅನ್ಯಾಯ ಕಾಲʼ ಎಂಬ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. “ಕೇಂದ್ರ ಸರ್ಕಾರವು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿದೆ. ಇದರಿಂದಾಗಿ ದೇಶದ ಬಡವರು ಬಸವಳಿದಿದ್ದಾರೆ. 2014-24ರವರೆಗೆ ಬಿಜೆಪಿ ಆಡಳಿತವು ವಿಫಲವಾಗಿದೆ. ರೈತರ ವಿಷಯದಲ್ಲೂ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಕನಿಷ್ಠ ಬೆಂಬಲ ನೀಡಿಲ್ಲ, ರೈತರ ಆದಾಯ ದ್ವಿಗುಣ ಮಾಡಿಲ್ಲ.” ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

“ಪ್ರಧಾನಿ ನರೇಂದ್ರ ಮೋದಿ ಅವರು ಹಸಿ ಹಸಿ ಸುಳ್ಳುಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಅವರು ಭಾಷೆಯನ್ನು ಅಸ್ತ್ರವಾಗಿ ಬಳಸಿಕೊಂಡು, ಭಾಷಣ ಮಾಡಿಕೊಂಡು ಜನರ ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಆದರೆ, ದೇಶದ ಯುವಕರಿಗೆ ಉದ್ಯೋಗ, ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹಣಿಯಲಾಗುತ್ತಿದೆ. ಪ್ರತಿಪಕ್ಷ ನಾಯಕರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಖರ್ಗೆ ಟೀಕಿಸಿದರು.

ಪ್ರಧಾನಿ ಹುದ್ದೆಗೆ ಗೌರವ ಇದೆ

“ದೇಶದ ಪ್ರಧಾನಿ ಹುದ್ದೆಗೆ ಒಂದು ಗೌರವ ಇದೆ. ಅದನ್ನು ನರೇಂದ್ರ ಮೋದಿ ಅವರು ಕಾಪಾಡುತ್ತಿಲ್ಲ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ಅವಹೇಳನ ಮಾಡುವುದರಲ್ಲಿಯೇ ಮೋದಿ ಕಾಲ ಕಳೆಯುತ್ತಿದ್ದಾರೆ. ತೆರಿಗೆ ಅನ್ಯಾಯದ ಕುರಿತು ಇವರದ್ದೇ ಪಕ್ಷದವರು ಮಾತನಾಡಿದರೆ ಸುಮ್ಮನಿರುತ್ತಾರೆ. ಪ್ರತಿಪಕ್ಷಗಳು ಮಾತನಾಡಿದರೆ ಅದನ್ನು ದೇಶದ್ರೋಹ ಎನ್ನುತ್ತಾರೆ” ಎಂದು ದೂರಿದರು.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಆದಾಯ, ಖರ್ಚು ಸೇರಿ ಎಲ್ಲ ಆರ್ಥಿಕ ಚಟುವಟಿಕೆಗಳು, ಸಾಧನೆಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುವುದನ್ನೇ ಶ್ವೇತಪತ್ರ ಎನ್ನುತ್ತಾರೆ. ಆದರೆ, ಸಂಸತ್‌ನಲ್ಲಿ ಕಪ್ಪುಪತ್ರ ಹೊರಡಿಸುವ ಪ್ರಕ್ರಿಯೆ, ನಿಯಮ ಇಲ್ಲ. ಇದನ್ನು, ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯ ದ್ಯೋತಕವಾಗಿಯೂ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಎನ್‌ಡಿಎ vs ಯುಪಿಎ; ಶ್ವೇತಪತ್ರ ಹೊರಡಿಸಲು ಅಧಿವೇಶನದ ಅವಧಿ 1 ದಿನ ವಿಸ್ತರಿಸಿದ ಕೇಂದ್ರ

ಆರ್ಥಿಕ ಪ್ರಗತಿ ಕುರಿತು ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಲು ಸಂಸತ್‌ ಬಜೆಟ್‌ ಅಧಿವೇಶನವನ್ನು ಒಂದು ದಿನ ಮುಂದೂಡಿದೆ ಎಂದು ತಿಳಿದುಬಂದಿದೆ. ಜನವರಿ 31ರಂದು ಆರಂಭವಾದ ಸಂಸತ್‌ ಬಜೆಟ್‌ ಅಧಿವೇಶನವು ಫೆಬ್ರವರಿ 9ರಂದು ಮುಗಿಯಬೇಕಿತ್ತು. ಆದರೆ, ಕಲಾಪವನ್ನು ಒಂದು ದಿನ ಮುಂದೂಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version